ಉಡುಪಿ: ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೆ ತೆಂಕನಿಡಿಯೂರು ಗ್ರಾಪಂ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿರುವುದನ್ನು ಪ್ರಶ್ನಿಸಿದ ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥರ ಮೇಲೆ ಗ್ರಾಪಂ ಅಧ್ಯಕ್ಷರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು ಖಂಡನೀಯ. ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಅಧ್ಯಕ್ಷರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಗ್ರಾಪಂ ಸದಸ್ಯ ಪ್ರಖ್ಯಾತ್ ಶೆಟ್ಟಿ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಜನರಿಂದ ಆಯ್ಕೆಯಾದ ಸದಸ್ಯರಿಗೆ ಪಂಚಾಯತ್ ನಲ್ಲಿ ನಡೆದ ತಪ್ಪನ್ನು ಪ್ರಶ್ನಿಸುವ ಹಕ್ಕಿದೆ. ಆದರೆ ಬಿಜೆಪಿ ಬೆಂಬಲಿತ ಅಧ್ಯಕ್ಷರು ಸೂಕ್ತ ಉತ್ತರ ನೀಡದೆ ಉಡಾಫೆಯ ವರ್ತನೆಯನ್ನು ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪಂಚಾಯತ್ ವ್ಯವಸ್ಥೆ ಪಾರದರ್ಶಕವಾಗಿರಬೇಕು. ರಸ್ತೆಯ ಬದಿಗಿದ್ದು ಜನರಿಗೆ ಸುಗಮವಾಗಿ ಪ್ರವೇಶಿಸಲು ಇದ್ದ ಮುಖ್ಯದ್ವಾರವನ್ನು ತೆಗೆದು ಒಂದು ಮೂಲೆಯಲ್ಲಿ ಜನರಿಗೆ ನಡೆದಾಡಲು ಕೂಡ ಸಾಧ್ಯವಾಗದ ರೀತಿಯಲ್ಲಿ ಮುಖ್ಯ ದ್ವಾರವನ್ನು ನಿರ್ಮಿಸಲಾಗಿದೆ. ಪಂಚಾಯತ್ ನ ಕಾರ್ಯವೈಖರಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಇದ್ದಂತೆ ಪ್ರವೇಶದ್ವಾರ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ ಶೆಟ್ಟಿ, ಯತೀಶ್ ಕರ್ಕೇರಾ, ಗ್ರಾಪಂ ಸದಸ್ಯರಾದ ಶರತ್ ಶೆಟ್ಟಿ, ಅನುಷಾ ಆಚಾರ್ಯ ಇದ್ದರು.