ಉದ್ಯಾವರ ಗ್ರಾಪಂಗೆ ಬೀಗ ಜಡಿದ ಗ್ರಾಮಸ್ಥರು

ಉಡುಪಿ: ಪರಿಸರಕ್ಕೆ ಮಾರಕವಾಗಿರುವ ಕೈಗಾರಿಕೆಗಳಿಗೆ ಉದ್ಯಾವರ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಇಂದು ಪಂಚಾಯತಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸಾರ್ವಜನಿಕರ, ಗ್ರಾಮಸಭೆಯ, ಪಂಚಾಯತಿ ಸಭೆಗಳ ನಿರ್ಣಯದ ಹೊರತಾಗಿಯೂ ಪಂಚಾಯಿತಿ ಆಡಳಿತಾಧಿಕಾರಿ ನಾಗಶಯನ ಹಾಗೂ ಪಿಡಿಒ ಪ್ರವೀಣ್ ಡಿಸೋಜ ಅವರು ಜನವಿರೋಧಿ ಹಾಗೂ ಪರಿಸರಕ್ಕೆ ಮಾರಕವಾದ ಉದ್ಯಮಗಳಿಗೆ ಪರವಾನಿಗೆ ನೀಡಿದ್ದರು ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ನೇರವಾಗಿ ಪಂಚಾಯಿತಿಗೆ ಬಂದು, ಕಚೇರಿಗೆ ಬೀಗ ಜಡಿದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಇಬ್ಬರೂ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

ನೂತನ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಸ್ಥರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಕೂಡಲೇ ಉನ್ನತ ಅಧಿಕಾರಿಗಳು ಬಂದು ಸಮಸ್ಯೆಯನ್ನು ಸರಿಪಡಿಸಬೇಕು. ಅಲ್ಲಿಯವರೆಗೆ ಗ್ರಾಮ ಪಂಚಾಯತ್ ಕಚೇರಿ ತೆರೆಯಲು ಅವಕಾಶ ನೀಡುವುದಿಲ್ಲ. ಈ ವಿಚಾರದಲ್ಲಿ ರಾಜೀನಾಮೆ ಕೊಡಲು ಸಿದ್ಧರಿದ್ದೇವೆ ಎಂದು ಸದಸ್ಯರು ಎಚ್ಚರಿಕೆ ನೀಡಿದರು.