ವಕೀಲರ ಮೂಲಕ ದೂರು ನೀಡಲು ಮುಂದಾದ ಸಂತ್ರಸ್ತ ಯುವತಿ; ಜಾರಕಿಹೊಳಿಗೆ ಸಂಕಷ್ಟ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯೇ ಸ್ವತಃ ದೂರು ಬರೆದುಕೊಟ್ಟಿದ್ದಾರೆ. ದೂರಿನ ಪ್ರತಿಯನ್ನು ನಾನು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸಲ್ಲಿಸುತ್ತೇನೆ ಎಂದು ಸಂತ್ರಸ್ತ ಯುವತಿ ಪರ ವಕೀಲ ಜಗದೀಶ್ ಕೆ ಎನ್​ ಮಹದೇವ್​ ಹೇಳಿದ್ದಾರೆ.

ಯುವತಿ ಆರೋಪಿಸುತ್ತಿರುವ ವ್ಯಕ್ತಿ ಪ್ರಭಾವಶಾಲಿಯಾಗಿದ್ದಾರೆ. ಹೀಗಾಗಿ ಭದ್ರತೆಯ ಕಾರಣದಿಂದ ನಮ್ಮ ಮುಖಾಂತರ ದೂರು ಕೊಡಿಸುತ್ತಿದ್ದಾರೆ. ಈ ಮೊದಲೇ ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನನ್ನನ್ನೂ ಸೇರಿ 8 ವಕೀಲರು ಸಹಾಯ ಮಾಡುತ್ತಿದ್ದೇವೆ. ಸಿಡಿಯಲ್ಲಿರುವ ಯುವತಿ ಸಾಮಾನ್ಯ ಮಹಿಳೆಯಾಗಿದ್ದಾರೆ. ಹೀಗಾಗಿ ಆಕೆ ಪೊಲೀಸರಿಗೆ ಹೇಳಿಕೆ ನೀಡುವುದಕ್ಕೆ ನಾವು ಸಹಾಯ ಮಾಡುತ್ತಿದ್ದೇವೆ ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.

ಆಕೆಯ ಬಳಿ ಸಾಕ್ಷ್ಯಗಳು ಇದೆಯೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕೆ ಆ ಯುವತಿಗೆ ಸಹಾಯ ಮಾಡುತ್ತಿದ್ದೇವಷ್ಟೇ. ತನಿಖೆಯ ಮೂಲಕ ಸತ್ಯಾಂಶ ಹೊರಗಡೆ ಬರುತ್ತದೆ. ಕಳೆದ ಕೆಲವು ದಿನಗಳಿಂದ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ನಾನು ಫೇಸ್‌ಬುಕ್ ಮೂಲಕ ಮನವಿ ಮಾಡಿದ್ದೆ. ಕಾನೂನು ಬೆಂಬಲ ನೀಡುವುದಾಗಿ ಹೇಳಿದ್ದೆ. ನಮ್ಮನ್ನು ನಂಬಿ ಆ ಯುವತಿ ಮುಂದೆ ಬಂದಿದ್ದಾರೆ.

ಒಂದೆರಡು ದಿನದಲ್ಲಿ ಆ ಯುವತಿ ಮುಂದೆ ಬರಬಹುದು. ಯುವತಿ ಹೊರಗೆ ಬರಬಹುದು ಎಂದು ಅನಿಸುತ್ತಿದೆ. ನಾನು ಯಾವುದೇ ರೀತಿಯ ದೂರು ನೀಡುತ್ತಿಲ್ಲ. ಆ ಯುವತಿ ಕೊಟ್ಟಿರುವ ದೂರಿನ ಪ್ರತಿಯನ್ನು ಮಧ್ಯಾಹ್ನ ಆಯುಕ್ತರಿಗೆ ಸಲ್ಲಿಸ್ತಿದ್ದೇವೆ. ಮುಂದಿನ ನಿರ್ಧಾರ ಪೊಲೀಸ್ ಆಯುಕ್ತರಿಗೆ ಬಿಟ್ಟದ್ದು. CDಯಲ್ಲಿದ್ದ ಯುವತಿ ತಂದೆ-ತಾಯಿಗೆ ರಕ್ಷಣೆ ನೀಡಿದರೆ ನಾಳೆಯೇ ಯುವತಿ ಹೊರಗೆ ಬರಬಹುದು ಎಂದು ಹೇಳಿದ್ದಾರೆ.