ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆ ಮುರಿಯಲು ಹೊರಟಿದೆ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ನಾಡಿನ ರೈತರು ಬರಗಾಲ, ಪ್ರವಾಹ, ಕೊರೊನಾ ಹಾವಳಿಗಳಿಂದಾಗಿ ಈಗಾಗಲೇ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರ ಜೊತೆಗೆ ನಿಲ್ಲಬೇಕಿದ್ದ ಸರ್ಕಾರ ಭೂಸುಧಾರಣಾ ಕಾಯ್ದೆ, ಎ.ಪಿ.ಎಂ.ಸಿ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರ ಬೆನ್ನುಮೂಳೆಯನ್ನೇ ಮುರಿಯಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಂಗಳೂರಿನಲ್ಲಿ ನಡೆದ ನ್ಯಾ. ನಾಗಮೋಹನ ದಾಸ್ ಅವರ ರೈತರ ಭದ್ರತೆ ದೇಶದ ಭದ್ರತೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಕಿಪೊಟ್ಟಣ ತಯಾರಿಸುವವನೂ ದರ ನಿಗದಿ ಮಾಡುತ್ತಾನೆ. ಆದರೆ ರೈತರು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಅಧಿಕಾರ ಇಲ್ಲದಾಗಿದೆ. ಇದರಿಂದ ರೈತಾಪಿ ವರ್ಗ ನಿರಂತರ ಆರ್ಥಿಕ ಶೋಷಣೆ ಎದುರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಮಿಕರು, ದಲಿತರು, ರೈತರೇ ದೇಶದ ಸಂಪತ್ತಿಗೆ ಕಾರಣ. ಆದರೆ ಇಂದು ಅವರಿಗೆ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಸಂಕಷ್ಟವಾಗಲಿದೆ. ಇದರಿಂದ ರಿಯಲ್ ಎಸ್ಟೇಟ್, ಭ್ರಷ್ಟಾಚಾರಿಗಳು, ಕಾಳಧನಿಕರಿಗಷ್ಟೇ ಲಾಭ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾ. ನಾಗಮೋಹನ ದಾಸ್ ರೈತರ ಕುಟುಂಬದಿಂದ ಬಂದವರು. ಹಳ್ಳಿಗಾಡಿನ ಕೃಷಿ ಕ್ಷೇತ್ರದ ಬಗ್ಗೆ ಅವರಿಗೆ ಹೆಚ್ಚು ಅನುಭವವಿದೆ. ಈ ಪುಸ್ತಕದಲ್ಲಿ ಭೂ ಸುಧಾರಣೆಯ ಬಗ್ಗೆ ಒಳ್ಳೆಯ ಮಾಹಿತಿ ಇದೆ ಎಂದರು.