ಐಪಿಎಲ್ 2021 ಉಳಿದ ಪಂದ್ಯಗಳು ಯುಎಇಗೆ ಸ್ಥಳಾಂತರ

ಮುಂಬೈ: ಕೋವಿಡ್‌ನಿಂದಾಗಿ ಅರ್ಧದಲ್ಲೇ ಮೊಟಕುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಉಳಿದಿರುವ ಪಂದ್ಯಗಳು ಯುಎಇನಲ್ಲಿ ಆಯೋಜನೆಯಾಗಲಿವೆ.

ಸೌರವ್ ಗಂಗೂಲಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಗಿದೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿರುವ ಐಪಿಎಲ್ ಟೂರ್ನಿಯ ಉಳಿದಿರುವ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗುವುದು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿಕೆಯನ್ನು ಎಎನ್‌ಐ ಟ್ವೀಟ್ ಮಾಡಿದೆ.

ಐಪಿಎಲ್‌ನಲ್ಲಿ ಬಾಕಿ ಉಳಿದಿರುವ 31 ಪಂದ್ಯಗಳನ್ನು ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.