ಉಡುಪಿ: ಖ್ಯಾತ ಗಾಯಕ ಎಸ್.ಬಿ. ಬಾಲಸುಬ್ರಹ್ಮಣ್ಯ ಅವರಿಗೂ ಉಡುಪಿ ಶ್ರೀಕೃಷ್ಣಮಠಕ್ಕೂ ಅವಿನಾಭಾವ ಸಂಬಂಧವಿದೆ. ಅವರು 1972ರಿಂದ 2016ರ ವರೆಗೆ ಕೃಷ್ಣಮಠಕ್ಕೆ ಆಗಾಗ ಭೇಟಿ ನೀಡಿರುವುದೇ ಇದಕ್ಕೆ ಸಾಕ್ಷಿ.
1972 ಹಾಗೂ 1996 ರಲ್ಲಿ ಬೋರ್ಡ್ ಹೈಸ್ಕೂಲ್ ನಲ್ಲಿ ಎಸ್ ಪಿಬಿ ಅವರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಅಲ್ಲದೆ, 2004-06ರಲ್ಲಿ ಶ್ರೀ ಅದಮಾರು ವಿಶ್ವಪ್ರಿಯತೀರ್ಥರ ದ್ವಿತೀಯ ಪರ್ಯಾಯದ ಅವಧಿಯಲ್ಲಿ ಹಂಸಲೇಖ ನೇತೃತ್ವದಲ್ಲಿ ರಾಜಾಂಗಣದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದ ಎಸ್ ಪಿಬಿ:
2016ರ ಜೂನ್ 4ರಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮದಿನದಂದು ಎಸ್ ಪಿಬಿ ಶ್ರೀಗಳನ್ನು ಕೃಷ್ಣಮಠದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು. ಕೊಲ್ಲೂರು ಮೂಕಾಂಬಿಕಾ ದೇವರ ದರ್ಶನ ಮುಗಿಸಿ, ನೇರವಾಗಿ ಕೃಷ್ಣಮಠಕ್ಕೆ ಬಂದಿದ್ದರು. ಮಠದ ಚಂದ್ರಶಾಲೆಯಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಬಾರೋ ಕೃಷ್ಣಯ್ಯ ,ಕೃಷ್ಣಾ ನೀ ಬೇಗನೆ ಬಾರೋ ಹಾಡಿದ್ದರು.
ತಮ್ಮಂಥಹ ಮಹಾನುಭಾವರ ಮಹಾತಪಸ್ವಿಗಳ ದರ್ಶನದಿಂದ ನನಗೆ ಉತ್ಸಾಹ ಶಕ್ತಿ ಹೆಚ್ಚಾಗಿದೆ ಎಂದು ಭಾವುಕರಾಗಿ ಶ್ರೀಗಳಲ್ಲಿ ಮಾತಾಡಿದ್ದರು.
ಶ್ರೀಗಳು ತಮ್ಮ ಪರ್ಯಾಯದ ಅವಧಿಯಲ್ಲಿ ಗಾಯನ ಕಾರ್ಯಕ್ರಮ ಆಗಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಅಯ್ಯೋ ಅದು ನನ್ನ ಭಾಗ್ಯ ಮಾಡೋಣ ಅಂದಿದ್ರು. ಆದರೆ ಆಗಲಿಲ್ಲ ಅನ್ನೋದು ಮಾತ್ರ ಬೇಸರದ ವಿಷಯ ಎಂದು ಪೇಜಾವರ ಶ್ರೀಗಳ ಆಪ್ತರಾದ ವಾಸುದೇವ ಭಟ್ ಪೆರಂಪಳ್ಳಿ ತಿಳಿಸಿದ್ದಾರೆ. .