ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿ ತಿಥಿಯಂದು ಪ್ರತ್ಯಕ್ಷ: ತಿಥಿಯ ಸಿದ್ಧತೆಯಲ್ಲಿದ್ದ ಮನೆಯವರಿಗೆ ಶಾಕ್

ಬೆಳ್ತಂಗಡಿ: ಸತ್ತಿದ್ದಾರೆ ಅಂದುಕೊಂಡ ವ್ಯಕ್ತಿಯೊಬ್ಬರು ತಿಥಿಯ ದಿನದಂದು ಪ್ರತ್ಯಕ್ಷಗೊಂಡ ವಿಚಿತ್ರ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಶ್ರೀನಿವಾಸ್ ದೇವಾಡಿಗ ‍(50 ) ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಮನೆಯವರು ಎಷ್ಟು ಹುಡುಕಾಟ ನಡೆಸಿದರೂ ಶ್ರೀನಿವಾಸ್ ದೇವಾಡಿಗ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಮನೆಯವರು ದೂರು‌ ದಾಖಲಿಸಿದ್ದರು.

ಫೆ. 6ರಂದು ಬೆಳ್ತಂಗಡಿಯ ಕಳಿಯ ಗ್ರಾಮದ ಗುಡ್ಡವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಅಲ್ಲದೆ ಮೃತದೇಹವು ಸಂಪೂರ್ಣ ಕೊಳೆತ ಸ್ಥಿಯಲ್ಲಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶ್ರೀನಿವಾಸ್ ದೇವಾಡಿಗರ ಮನೆಯವರಿಗೆ ವಿಷಯ ತಿಳಿಸಿ ಗುರುತು ಪತ್ತೆಹಚ್ಚಲು ಸ್ಥಳಕ್ಕೆ ಕರೆಸಿದ್ದಾರೆ.

ಅದರಂತೆ ಸ್ಥಳಕ್ಕೆ ಹೋದ ಮನೆಯವರು ಇದು ಶ್ರೀನಿವಾಸ್ ದೇವಾಡಿಗರ ಶವ ಎಂದು ಗುರುತು ಪತ್ತೆ ಮಾಡಿದ್ದಾರೆ. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿದ ಬೆಳ್ತಂಗಡಿ ಪೊಲೀಸರು ಮನೆಯವರಿಗೆ ಶವ ಹಸ್ತಾಂತರಿಸಿದ್ದಾರೆ. ಹಾಗೆ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.

ಆ ಬಳಿಕ ವ್ಯಕ್ತಿಯ ಮರಣ ಪತ್ರವನ್ನು ಪಡೆದುಕೊಂಡಿದ್ದರು. ಆದರೆ ಈಗ ಶ್ರೀನಿವಾಸ್ ದೇವಾಡಿಗ ತಿಥಿಯ ದಿನದಂದೆ ಪ್ರತ್ಯಕ್ಷಗೊಂಡಿದ್ದು, ಮನೆಮಂದಿ ಬೆಚ್ಚಿಬೀಳುವಂತೆ ಮಾಡಿದ್ದಾರೆ.