ತೆರೆಗೆ ಬರುತ್ತಿದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜೀವನಗಾಥೆ, ಅಮೀರ್ ಖಾನ್ ನಿರ್ಮಾಣದಲ್ಲಿ ಮೂಡಿಬರಲಿದೆ ರಾಷ್ಟ್ರಪತಿ ಸಾಕ್ಷ್ಯಚಿತ್ರ!

ಭಾರತದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು Droupadi Murmu ಅವರ ಜೀವನ ಪಯಣ ಇದೀಗ ಸಾಕ್ಷ್ಯಚಿತ್ರವಾಗಿ ಮೂಡಿಬರಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ Aamir Khan ನಿರ್ಮಿಸಲಿದ್ದಾರೆ.

ಆಮೀರ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಈ ಸಾಕ್ಷ್ಯಚಿತ್ರಕ್ಕೆ ಲೇಖಕಿ ಹಾಗೂ ನಿರ್ದೇಶಕಿ ಸ್ವಾತಿ ಚಕ್ರವರ್ತಿ ಭಟ್ಕಲ್ ನಿರ್ದೇಶನ ಮಾಡಲಿದ್ದಾರೆ.

ಒಡಿಶಾದ ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದ ಬಾಲಕಿಯೊಬ್ಬಳು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಪ್ರೇರಣಾದಾಯಕ ಪಯಣವನ್ನು ಈ ಸಾಕ್ಷ್ಯಚಿತ್ರದಲ್ಲಿ ತೆರೆದಿಡಲಾಗುತ್ತದೆ. ರಾಜಕೀಯ ಸಾಧನೆಗಳಿಗಿಂತಲೂ ಹೆಚ್ಚಾಗಿ ಅವರ ಜೀವನದ ಹೋರಾಟ, ಸವಾಲುಗಳು, ವೈಯಕ್ತಿಕ ನೋವುಗಳು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ.

ಸಾಕ್ಷ್ಯಚಿತ್ರದ ಕೆಲವು ಪ್ರಮುಖ ದೃಶ್ಯಗಳ ಚಿತ್ರೀಕರಣವನ್ನು ಅವರ ಹುಟ್ಟೂರಿನಲ್ಲೇ ನಡೆಸಲಾಗಿದೆ. ಬಾಲ್ಯದ ಘಟನೆಗಳನ್ನು ಮರುಸೃಷ್ಟಿಸಲು ಸ್ಥಳೀಯ ನಿವಾಸಿಗಳು ಮತ್ತು ಕಲಾವಿದರನ್ನು ವಿವಿಧ ಪಾತ್ರಗಳಲ್ಲಿ ಅಭಿನಯಿಸಲು ಬಳಸಲಾಗಿದೆ.

ಭಾರತದ ಎರಡನೇ ಮಹಿಳಾ ರಾಷ್ಟ್ರಪತಿ ಹಾಗೂ ಮೊದಲ ಆದಿವಾಸಿ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಅವರ ಜೀವನಗಾಥೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಉದ್ದೇಶದಿಂದ ಈ ವಿಶೇಷ ಸಾಕ್ಷ್ಯಚಿತ್ರ ನಿರ್ಮಾಣವಾಗುತ್ತಿದೆ.