ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ನಮ್ಮ ನೆಲ, ಜಲದ ಪ್ರಶ್ನೆ: ಎಸ್.ಆರ್. ಪಾಟೀಲ್

ಬೆಂಗಳೂರು: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹೊರರಾಜ್ಯದ ಜನರು ಬಂದು ನಮ್ಮ ಜಮೀನು ಖರೀದಿಸಲು ಅನುಕೂಲವಾಗಿದೆ. ಇದರಿಂದ ನಮ್ಮ ನೆಲ ಪರರ ಪಾಲಾಗುತ್ತದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊರರಾಜ್ಯದ ಕಾಳಧನಿಕರು ನಮ್ಮ ಭೂಮಿ‌ ಖರೀದಿಸುತ್ತಾರೆ. ಅದೇ ಜಮೀನಿಗೆ ನಮ್ಮ ಜಲಾಶಯದ ನೀರು ಬಳಸುತ್ತಾರೆ. ಆದರೆ ನಮ್ಮ ರೈತರು ಮಾತ್ರ ಸಾಲದಲ್ಲಿಯೇ ಸಾಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ನಮ್ಮ ನೆಲ, ಜಲದ ಪ್ರಶ್ನೆಯಾಗಿದ್ದು, ನಾಡಿನ ನೆಲ, ಜಲ ವಿಷಯ ಬಂದಾಗ ನಾವೆಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.