ಇನ್‌ಸ್ಪೆಕ್ಟರ್ ಮಾಡಬಾರದ್ದು ಏನು ಮಾಡಿಲ್ಲ, ಪೊಲೀಸ್‌ ಲಾಂಗ್ವೇಜ್‌ನಲ್ಲಿ ಹೇಳಿದ್ದಾರೆ; ಡಿಕೆಶಿ

ಬೆಂಗಳೂರು: ಇನ್‌ಸ್ಪೆಕ್ಟರ್ ಮಾಡಬಾರದ್ದು ಏನೂ ಮಾಡಿಲ್ಲ, ಅವರ ಲಾಂಗ್ವೇಜ್‌ನಲ್ಲಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಸಿಎಂ ಡಿಕೆ ಶಿವಕುಮಾರ್‌ (D K Shivakumar) ಧನಂಜಯ್‌ ಪರ ಬ್ಯಾಟಿಂಗ್‌ ಮಾಡಿದ್ದಾರೆ.

ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿಚಾರವಾಗಿ ಜನರಿಗೆ ವಾರ್ನಿಂಗ್‌ ನೀಡಿದ್ದ ಇನ್‌ಸ್ಪೆಕ್ಟರ್ ಧನಂಜಯ್‌ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯಿಸಿರುವ ವಿಚಾರವಾಗಿ ಅವರು ಪ್ರತಿಕ್ರಿಯಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್‌ಸ್ಪೆಕ್ಟರ್ ಮಾಡಬಾರದ್ದು ಏನೂ ಮಾಡಿಲ್ಲ. ಅವರ ಭಾಷೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದವರು ಅವರೇ ತಾನೇ ಎಂದು ಹೇಳಿದ್ದಾರೆ.

ಅಶೋಕ್ ಜವಾಬ್ದಾರಿಯುತ ವಿಪಕ್ಷ ನಾಯಕ. ಅವರಿಂದ ತುಂಬಾ ಎತ್ತರದ ನಿರೀಕ್ಷೆ ಮಾಡಿದ್ದೆ. ಪಾಪ, ಒಂದು ಗ್ರಾಮ ಪಂಚಾಯತ್ ಲೆವೆಲ್‌ನಲ್ಲಿ ಮಾಡುವ ಹೋರಾಟಕ್ಕೆ ಹೋಗಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದರು.

ನೈಸ್ ಹಾಗೂ ಬಿಡದಿ ಭೂ ಹಗರಣಗಳಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಗರಣಗಳ ದಾಖಲೆಗಳನ್ನು ಜನರ ಮುಂದೆ ತರುವುದಾಗಿ ಹೇಳಿದ ಕುಮಾರಸ್ವಾಮಿ ಬಗ್ಗೆ ಪ್ರತಿಕ್ರಿಯಿಸಿ, ಯಾರು ಯಾರನ್ನು ಸ್ಟಾಪ್ ಮಾಡೋಕೆ ಆಗುತ್ತದೆ? ಯಾರು ಏನು ಬೇಕಾದರೂ ಮಾತನಾಡಲಿ. ಏನು ಬೇಕೋ ಚರ್ಚೆ ಮಾಡಿಕೊಳ್ಳಲಿ. ಏನು ಬೇಕಾದರೂ ಬಿಡುಗಡೆ ಮಾಡಿಕೊಳ್ಳಲಿ ಎಂದು ಹೇಳಿದರು.