ಉಡುಪಿ: ದಕ ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಎಂಆರ್ಪಿಎಲ್ ಕಾರ್ಪೊರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಷಿಯೇಟಿವ್ ಸಹಯೋಗದಲ್ಲಿ ಉಚ್ಚಿಲದಲ್ಲಿ ನಿರ್ಮಾಣಗೊಂಡ ಭವ್ಯ ಮೊಗವೀರ ಭವನ ಭಾನುವಾರ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು.
ಎಮ್ ಆರ್ ಪಿ ಎಲ್ ಇದರ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಾತನಾಡಿ, ಶೈಕ್ಷಣಿಕ, ಸಾಮಾಜಿಕ ಯೋಜನೆಗಳಿಂದ ಸಮಾಜ ಅಭಿವೃದ್ಧಿ ಸಾಧ್ಯ. ಒಂದು ಪ್ರದೇಶದ ಬೆಳವಣಿಗೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಯೋಜನೆಗಳು ಸಹಕಾರಿ ಎಂದರು. ಮೊಗವೀರ ಭವನದ ನಿರ್ಮಾಣದಲ್ಲಿ ಎಮ್ ಆರ್ ಪಿ ಎಲ್ ಸಂಸ್ಥೆ ಸಹಭಾಗಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಈವರೆಗೆ ಸಂಸ್ಥೆ ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ರೂ 100 ಕೋಟಿಗೂ ಅಧಿಕ ಮೊತ್ತವನ್ನು ಸಿ ಎಸ್ ಆರ್ ಯೋಜನೆಯಡಿ ವಿನಿಯೋಗಿಸಲಾಗಿದೆ. ಮಂಗಳೂರಿನ ಆಸ್ಪತ್ರೆಯ ಬಳಿಕ ಅತೀ ಹೆಚ್ಚು ಮೊತ್ತವನ್ನು ನೀಡಿರುವುದು ಮೊಗವೀರ ಭವನಕ್ಕಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸಮಸ್ಯೆಯಿಂದಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಮುಂದೆ ಪರಿಸ್ಥಿತಿ ಸುಧಾರಣೆಯಾದ ಬಳಿಕ ಇನ್ನಷ್ಟು ಯೋಜನೆಗಳನ್ನು ಸಮಾಜಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ಮೊಗವೀರ ಭವನ ಸಮುದಾಯದ ಸ್ವಾಭಿಮಾನದ ಸಂಕೇತವಾಗಿದ್ದು, ಸುಮಾರು ರೂ 14 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಇದರಿಂದ ಬರುವ ಆದಾಯ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮತ್ತು ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ವಿನಿಯೋಗವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ಎಂ.ಆರ್.ಪಿ.ಎಲ್ ಜನರಲ್ ಮ್ಯಾನೇಜರ್ ಶ್ರೀಕೃಷ್ಣ ಹೆಗ್ಡೆ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಂಗಳೂರು ಇದರ ಅಧ್ಯಕ್ಷರಾದ ನಿತಿನ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಕೆ. ಸುವರ್ಣ, ಬಾರ್ಕೂರು ಶ್ರೀ ಕುಲಮಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಆನಂದ್ ಸಿ. ಕುಂದರ್, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ವಾಸುದೇವ ಸಾಲ್ಯಾನ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷರಾದ ಹರಿಯಪ್ಪ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಗುಂಡು ಬಿ. ಅಮೀನ್, ಉದ್ಯಾವರ ಸದಿಯ ಸಾಹುಕಾರ್ ಮನೆತನದ ಪ್ರತಿನಿಧಿ ಯು. ಗಣೇಶ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘ ಕುಂದಾಪುರ ಶಾಖಾಧ್ಯಕ್ಷರಾದ ಕೆ.ಕೆ ಕಾಂಚನ್, ದಕ್ಷಿಣ ಕನ್ನಡ ಮೊಗವೀರ ಮಹಿಳಾ ಸಂಘದ ಅಧ್ಯಕ್ಷರಾದ ಅಪ್ಪಿ ಎಸ್. ಸಾಲ್ಯಾನ್ ಹಾಗೂ ಪ್ರಮುಖರಾದ ಅಜಿತ್ ಸುವರ್ಣ, ಲೋಕೇಶ್ ಪುತ್ರನ್, ಸುಭಾಶ್ಚಂದ್ರ ಕಾಂಚನ್, ರಾಜೂ ವಂಡ್ಸೆ, ಶಿವರಾಮ್ ಕೋಟ, ಸುರೇಶ್ ಕಾಂಚನ್, ಮೌಲಾಲಿ, ಸುನೇತಾ ಅಪ್ಪಣ್ಣ, ರಾಘವೇಂದ್ರ ಉಪಾಧ್ಯಾಯ, ಶಿವರಾಮ್ ಕೆ. ಹಾಗೂ ಇತರರು ಉಪಸ್ಥಿತರಿದ್ದರು.
ನಾಡೋಜ ಡಾ ಜಿ ಶಂಕರ್ ಸ್ವಾಗತಿಸಿ, ದಕ ಜಿಲ್ಲಾ ಮೊಗವೀರ ಮಹಾಜನ ಸಂಘ ಉಚ್ಚಿಲ ಕಾರ್ಯದರ್ಶಿ ಸುಧಾಕರ ಕುಂದರ್ ವಂದಿಸಿದರು. ಚಂದ್ರೇಶ್ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು.
ಸಭಾಭವನದ ವಿಶೇಷತೆ:
ಅತ್ಯುಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಭಾಭವನವನ್ನು ನಿರ್ಮಿಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಎರಡು ವಿಶಾಲ ಸಭಾಂಗಣಗಳನ್ನು ಒಳಗೊಂಡಿದೆ. 1,100 ಮಂದಿಯ ಸಾಮರ್ಥ್ಯದ ಮಾಧವ ಮಂಗಲ ಸಭಾಂಗಣ ಹಾಗೂ ಕುಲಮಹಾಸ್ತ್ರಿ ಸಭಾಂಗಣ 900 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ. ಸಸ್ಯಾಹಾರ ಮತ್ತು ಮಾಂಸಹಾರದ ಪ್ರತ್ಯೇಕ ಅಡುಗೆ ಕೋಣೆಗಳು ಹಾಗೂ ವಿಶಾಲ ಭೋಜನ ಗೃಹ ಇದೆ. ಅತ್ಯಾಧುನಿಕ ಲಿಫ್ಟ್, ಜನರೇಟರ್, ಸಿಸಿಟಿವಿ ಕಣ್ಗಾವಲು ಹಾಗೂ ಏಕಕಾಲದಲ್ಲಿ 550 ಕಾರು ನಿಲುಗಡೆ ಸಾಮರ್ಥ್ಯದ ವಿಶಾಲ ಪಾರ್ಕಿಂಗ್ ಸೌಲಭ್ಯವನ್ನು ಹೊಂದಿದೆ. ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ ನೆರವೇರಲಿದೆ.ಎಲ್ಲ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಶುಭಸಮಾರಂಭಗಳನ್ನು ನಡೆಸಲು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಸಭಾಭವನ ನಿರ್ಮಾಣ ಮಾಡಬೇಕೆಂಬ ಆಶಯವನ್ನು ಸಂಘ ಹೊಂದಿತ್ತು. ಅದರಂತೆ ಸಮಾಜದ ಮಾರ್ಗದರ್ಶಕ ಡಾ. ಜಿ.ಶಂಕರ್ ನೇತೃತ್ವದಲ್ಲಿ ದ ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಎಂಆರ್ಪಿಎಲ್ ಕಾರ್ಪೊರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಷಿಯೇಟಿವ್ ಸಹಯೋಗದೊಂದಿಗೆ ಸಮಾಜದ ಹಿರಿಯರಾದ ಉದ್ಯಾವರದ ದಿ.ಸದಿಯ ಸಾಹುಕಾರ್ ಅವರು ದೇವಸ್ಥಾನಕ್ಕೆ ನೀಡಿದ 14 ಎಕರೆ ಜಾಗದಲ್ಲಿ ಈ ಭವ್ಯ ಸಭಾಭವನವನ್ನು ನಿರ್ಮಿಸಲಾಗಿದೆ.