5G ತರಂಗಾಂತರ ಹರಾಜು ಪ್ರಕ್ರಿಯೆ ನಡೆಸಲು ಕೇಂದ್ರ ಸರಕಾರದ ಅನುಮೋದನೆ: ಜುಲೈ 26 ರಂದು ಹರಾಜು ಪ್ರಕ್ರಿಯೆಗೆ ಚಾಲನೆ

ನವದೆಹಲಿ: ಭಾರತದಲ್ಲಿ 5G ತರಂಗಾಂತರ ಹರಾಜನ್ನು ಸರ್ಕಾರ ಅನುಮೋದಿಸಿದೆ. 5G ಹರಾಜುಗಳನ್ನು ಜುಲೈ 26 ರಂದು ನಡೆಸಲಾಗುವುದು ಎಂದು ಹೇಳಲಾಗುತ್ತದೆ. 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ 72 GHz ಸ್ಪೆಕ್ಟ್ರಮ್ ಅನ್ನು ಹರಾಜಿಗೆ ಹಾಕಲಾಗುತ್ತದೆ.

ವಿವಿಧ ಆವರ್ತನ ಬ್ಯಾಂಡ್‌ಗಳ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯಲಿದೆ. ಭಾರತದಲ್ಲಿ 5G ಯು 4G ಗಿಂತ 10 ಪಟ್ಟು ವೇಗವಾಗಿರುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ. ದೂರಸಂಪರ್ಕ ಇಲಾಖಾ ಮಾಹಿತಿಯ ಪ್ರಕಾರ, ದೇಶದಾದ್ಯಂತ 13 ನಗರಗಳು ಆರಂಭದಲ್ಲಿ 5G ಅನ್ನು ಪಡೆಯಲಿವೆ. ಈ 13 ನಗರಗಳು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ.

ದೇಶಾದ್ಯಂತ 5G ವೇಗದ ಇಂಟರ್ನೆಟ್ ಸೇವೆಗಳು ದೊರಕಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು, ಅಲ್ಲಿವರೆಗೂ ಹಂತಹಂತವಾಗಿ ವಿವಿಧ ನಗರಗಳಲ್ಲಿ 5G ಸೇವೆ ಒದಗಿಸಲಾಗುತ್ತದೆ ಎನ್ನಲಾಗಿದೆ. ಮೂರು ದೂರ ಸಂಪರ್ಕ ಕಂಪನಿಗಳಾದ ಜಿಯೋ, ಏರ್ ಟೆಲ್ ಮತ್ತು ವೊಡಾಫೋನ್ ಐಡಿಯಾ ಈಗಾಗಲೇ ಕೆಲವು ನಗರಗಳಲ್ಲಿ ಪ್ರಾಯೋಗಿಕ ಸೈಟ್‌ಗಳನ್ನು ಸ್ಥಾಪಿಸಿವೆ. ಅದಾಗ್ಯೂ, ಭಾರತದಲ್ಲಿ ಯಾವ ಟೆಲಿಕಾಂ ಆಪರೇಟರ್ ಕಂಪನಿ ವಾಣಿಜ್ಯಿಕವಾಗಿ 5G ಸೇವೆಗಳನ್ನು ಹೊರತರಲಿದೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.

ಈ ವರ್ಷದ ಅಕ್ಟೋಬರ್ ಅಂತ್ಯದೊಳಗೆ 5G ಸೇವೆಗಳು ಪ್ರಮುಖ ನಗರಗಳಲ್ಲಿ ದೊರೆಯಬಹುದು ಎಂದು ಅಂದಾಜಿಸಲಾಗಿದೆ.