ಮಂಗಳೂರು ಏರ್‌ಪೋರ್ಟ್‌ನಲ್ಲಿ ಕಂಬಳದ ವೈಭವ: ತುಳುನಾಡಿನ ಜಾನಪದ ಕ್ರೀಡೆಯ ಮನಮೋಹಕ ಕಲಾಕೃತಿ ನೋಡಿ ಪ್ರಯಾಣಿಕರು ಖುಷ್!

ಕಂಬಳದ ರೋಮಾಂಚಕಾರಿ ದೃಶ್ಯ ಅನಾವರಣ

ಈಗಾಗಲೇ ದೇಶೀಯ ವಿಮಾನಗಳ ಬ್ಯಾಗೇಜ್ ಬೆಲ್ಟ್ ಬಳಿ ಮೊದಲ ಕಂಬಳ ಕಲಾಕೃತಿಯನ್ನು ಸ್ಥಾಪಿಸಲಾಗಿದ್ದು, ಅದು ಪ್ರಯಾಣಿಕರಿಂದ ಮೆಚ್ಚುಗೆ ಪಡೆದಿದೆ. ಇದರ ಬೆನ್ನಲ್ಲೇ ವಿಮಾನ ನಿಲ್ದಾಣದ ಆಗಮನ ವಿಭಾಗದ ಕಟ್ಟಡದ ಮಧ್ಯಭಾಗ ಹಾಗೂ ರಾಂಪ್ ಎಕ್ಸಿಟ್ ಸಮೀಪ ಎರಡನೇ ಬೃಹತ್ ಕಲಾಕೃತಿಯನ್ನು ನಿರ್ಮಿಸಲಾಗಿದೆ.

ಕೆಸರಿನ ಗದ್ದೆಯಲ್ಲಿ ಕೋಣಗಳೊಂದಿಗೆ ಓಡುವ ಕಂಬಳದ ರೋಮಾಂಚಕಾರಿ ದೃಶ್ಯವನ್ನು ಕಲಾಕೃತಿಯಲ್ಲಿ ಮನಮೋಹಕವಾಗಿ ಬಿಂಬಿಸಲಾಗಿದೆ. ವಿಮಾನದಿಂದ ಇಳಿದು ನಗರಕ್ಕೆ ಹೆಜ್ಜೆ ಇಡುವ ಪ್ರಯಾಣಿಕರಿಗೆ ತುಳುನಾಡಿನ ಗ್ರಾಮೀಣ ಕೃಷಿ ಸಂಸ್ಕೃತಿ, ಒಕ್ಕಲುತನದ ಹಿನ್ನೆಲೆ ಹಾಗೂ ಜಾನಪದ ಕ್ರೀಡೆಯ ಪರಿಚಯ ಇಲ್ಲಿಯೇ ದೊರೆಯುತ್ತಿದೆ.\

ಯಕ್ಷಗಾನದ ಬಳಿಕ ಕಂಬಳಕ್ಕೂ ವಿಶೇಷ ಸ್ಥಾನ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಈಗಾಗಲೇ ಕರಾವಳಿಯ ಸಾಂಸ್ಕೃತಿಕ ಪ್ರತೀಕವಾದ ಯಕ್ಷಗಾನದ ಕಲಾಕೃತಿಗಳನ್ನು ವಿವಿಧೆಡೆ ಪ್ರದರ್ಶಿಸಲಾಗಿದೆ. ಇದೀಗ ಕಂಬಳದ ಕಲಾಕೃತಿಯೂ ಸೇರ್ಪಡೆಯಾಗಿದ್ದು, ವಿಮಾನ ನಿಲ್ದಾಣಕ್ಕೆ ಕರಾವಳಿಯ ಸಾಂಸ್ಕೃತಿಕ ವೈಭವದ ಮತ್ತಷ್ಟು ಮೆರುಗು ತಂದಿದೆ.

ಪ್ರಯಾಣಿಕರಿಂದ ಭರ್ಜರಿ ಮೆಚ್ಚುಗೆ

ವಿಮಾನ ನಿಲ್ದಾಣದಲ್ಲಿ ಕಂಬಳದ ಕಲಾಕೃತಿಗೆ ದೇಶೀಯ ಹಾಗೂ ವಿದೇಶಿ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅನೇಕ ಪ್ರವಾಸಿಗರು ಕಲಾಕೃತಿಯ ಬಳಿ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.

ಕರಾವಳಿಯ ಜಾನಪದ ಕ್ರೀಡೆಗೆ ವಿಮಾನ ನಿಲ್ದಾಣದ ಮೂಲಕ ನೀಡಲಾಗಿರುವ ಈ ವಿಶೇಷ ಗೌರವವು ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ಸಹಕಾರಿಯಾಗುತ್ತಿದೆ. ಮಂಗಳೂರಿಗೆ ಆಗಮಿಸುವ ಪ್ರವಾಸಿಗರಿಗೆ ವಿಮಾನ ನಿಲ್ದಾಣದಲ್ಲಿಯೇ ತುಳುನಾಡಿನ ಸಂಸ್ಕೃತಿಯ ಮೊದಲ ಝಲಕ್ ದೊರೆಯುವಂತಾಗಿದೆ.