ಏಪ್ರಿಲ್ 20ರಂದು ಉಡುಪಿಯ ನೂತನ ಧರ್ಮಾಧ್ಯಕ್ಷರ ಪೀಠಾರೋಹಣ ಹಾಗೂ ಅಭಿಷೇಕ ಸಮಾರಂಭ

ಉಡುಪಿ: ಉಡುಪಿ ಧರ್ಮಕ್ಷೇತ್ರದ ದ್ವಿತೀಯ ಧರ್ಮಾಧ್ಯಕ್ಷರಾಗಿ ಅತಿ ಗೌರವಾನ್ವಿತ ಡಾ. ಲೆಸ್ಲಿ ಕ್ಲಿಫರ್ಡ್ ಡಿ’ಸೋಜಾ ಅವರ ಧರ್ಮಾಧ್ಯಕ್ಷರ ಅಭಿಷೇಕ ಹಾಗೂ ಪೀಠಾರೋಹಣ ಸಮಾರಂಭವು ಏಪ್ರಿಲ್ 20, 2026ರಂದು ಸೋಮವಾರ ಬೆಳಗ್ಗೆ 9 ಗಂಟೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ನೆರವೇರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ತಿಳಿಸಿದರು.

ಅವರು ಬುಧವಾರ ಉಡುಪಿ ಶೋಕಮಾತಾ ಚರ್ಚಿನ ಆವೆ ಮರಿಯಾ ಸಭಾಂಗಣದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಗೋವಾ ಮತ್ತು ದಮನ್ ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರು ಹಾಗೂ FABC ಮತ್ತು CCBI ಅಧ್ಯಕ್ಷರಾದ ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ ಅವರ ನೇತೃತ್ವದಲ್ಲಿ ಪವಿತ್ರ ಬಲಿಪೂಜೆ ಸಂದರ್ಭದಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಅಭಿಷೇಕ ನಡೆಯಲಿದೆ.

ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾದೊ ಹಾಗೂ ಉಡುಪಿ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಜೆರಾಲ್ಡ್ ಐಸಾಕ್ ಲೋಬೊ ಸಹ-ಅಭಿಷೇಕಕಾರರಾಗಿ ಭಾಗವಹಿಸಲಿದ್ದಾರೆ.

ಈ ಐತಿಹಾಸಿಕ ಸಮಾರಂಭದಲ್ಲಿ ಭಾರತ ಮತ್ತು ನೇಪಾಳದ ಅಪೊಸ್ತೊಲಿಕ್ ನುನ್ಸಿಯೋ (ಪೋಪ್ ಅವರ ವ್ಯಾಟಿಕನ್ ರಾಯಭಾರಿ ಡಾ. ಲಿಯೋಪೋಲ್ಡೊ ಗಿರೆಲ್ಲಿ, ವಿವಿಧ ಮಹಾಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರು, ಧರ್ಮಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ರಾಜಕೀಯ ನಾಯಕರು, ವಿವಿಧ ಸಮುದಾಯಗಳ ಗಣ್ಯರು ಹಾಗೂ ಸಾವಿರಾರು ಭಕ್ತರು ಸೇರಿದಂತೆ ಸುಮಾರು 5000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಧಾರ್ಮಿಕ ವಿಧಿವಿಧಾನಗಳ ನಂತರ ಅದೇ ವೇದಿಕೆಯಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಉಡುಪಿ ಶಾಸಕ ಶ್ರೀ ಯಶಪಾಲ್ ಸುವರ್ಣ ಅವರು ಜಿಲ್ಲೆಯ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸಲಿದ್ದಾರೆ.ನಿವೃತ್ತ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು 2012ರಿಂದ 2026ರವರೆಗೆ 13 ವರ್ಷಗಳ ಕಾಲ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ ಯುವಕರು, ಬಡವರು ಮತ್ತು ಹಿಂದುಳಿದವರ ಬಗ್ಗೆ ವಿಶೇಷ ಕಾಳಜಿ ತೋರಿದ ಅವರು ಸರಳತೆ, ವಿನಯ ಹಾಗೂ ಸೌಮ್ಯ ಸ್ವಭಾವದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಧರ್ಮಗಳೊಂದಿಗೆ ಅತ್ಯುತ್ತಮ ಸಂಬಂಧ ಹೊಂದಿರುವ ಅವರು ಸರ್ವ ಧರ್ಮ ಸಮನ್ವಯತೆಗೆ ವಿಶೇಷ ಕೊಡುಗೆ ನೀಡಿದ್ದಾರೆ.

ನೂತನ ಧರ್ಮಾಧ್ಯಕ್ಷರ ಕುರಿತು:

ಪೋಪ್ ಲಿಯೋ XIV ಅವರು 2026 ಜನವರಿ 31ರಂದು ಡಾ. ಲೆಸ್ಲಿ ಸಿ. ಡಿ’ಸೋಜಾ ಅವರನ್ನು ಉಡುಪಿ ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

1962 ಆಗಸ್ಟ್ 19ರಂದು ಉಡುಪಿ ಜಿಲ್ಲೆಯ ಎರ್ಮಾಳಿನಲ್ಲಿ ಜನಿಸಿದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕಲಾ ಪದವಿ ಪಡೆದಿದ್ದಾರೆ. ಮಂಗಳೂರು ಸೆಂಟ್ ಜೋಸೆಫ್ ಇಂಟರ್ ಡಯೋಸಿಸನ್ ಗುರುಮಠದಲ್ಲಿ ತತ್ವಶಾಸ್ತ್ರ ಹಾಗೂ ಧರ್ಮಶಾಸ್ತ್ರ ಅಧ್ಯಯನ ನಡೆಸಿ, ಬೆಲ್ಜಿಯಂನ ಲೂವನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಿಂದ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.

1990 ಮೇ 10ರಂದು ಧರ್ಮಗುರುಗಳಾಗಿ ಅಭಿಷೇಕಗೊಂಡ ಅವರು ಮಂಗಳೂರು ಹಾಗೂ ಉಡುಪಿ ಧರ್ಮಕ್ಷೇತ್ರಗಳಲ್ಲಿ ಸಹಾಯಕ ಧರ್ಮಗುರುಗಳಾಗಿ, ಪ್ರಾಧ್ಯಾಪಕ ಹಾಗೂ ವಿವಿಧ ಚರ್ಚುಗಳಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಧರ್ಮಕ್ಷೇತ್ರ ಕುರಿತು:

ಉಡುಪಿ ಧರ್ಮಕ್ಷೇತ್ರವನ್ನು 2012 ಜುಲೈ 16ರಂದು ಪೋಪ್ ಬೆನೆಡಿಕ್ಟ್ XVI ಅವರು ಘೋಷಣೆ ಮಾಡಿದ್ದರು. ಅಂದು ಶಿಮೋಗ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿದ್ದ ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಮೊದಲ ಧರ್ಮಾಧ್ಯಕ್ಷರಾಗಿ ನೇಮಕ ಮಾಡಲಾಯಿತು.ಈ ಧರ್ಮಕ್ಷೇತ್ರವು ಕಾರ್ಕಳ, ಕುಂದಾಪುರ, ಕಾಪು, ಬೈಂದೂರು, ಹೆಬ್ರಿ, ಬ್ರಹ್ಮಾವರ ಹಾಗೂ ಉಡುಪಿ ತಾಲೂಕುಗಳನ್ನು ಒಳಗೊಂಡಿದೆ. ಬೆಂಗಳೂರು ಮಹಾಧರ್ಮಪ್ರಾಂತ್ಯದ ಅಧೀನದಲ್ಲಿರುವ ಈ ಧರ್ಮಕ್ಷೇತ್ರದ ಪ್ರಧಾನ ದೇವಾಲಯ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ ಆಗಿದೆ.

ಸುಮಾರು 5,924 ಚದರ ಕಿಲೋಮೀಟರ್ ವ್ಯಾಪ್ತಿಯ ಈ ಧರ್ಮಕ್ಷೇತ್ರದಲ್ಲಿ 60,338 ಕ್ಯಾಥೋಲಿಕ್ ಭಕ್ತರು ವಾಸಿಸುತ್ತಿದ್ದಾರೆ. 51 ಚರ್ಚುಗಳು, ಒಂದು ಬಸಿಲಿಕಾ, ಮೂರು ತೀರ್ಥಕ್ಷೇತ್ರಗಳು ಹಾಗೂ ಏಳು ಉಪಕೇಂದ್ರಗಳನ್ನು ಒಳಗೊಂಡಿದೆ.ಶಿಕ್ಷಣ ಕ್ಷೇತ್ರದಲ್ಲಿ ನರ್ಸರಿ ಶಾಲೆಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ಕಾಲೇಜುಗಳು ಸೇರಿದಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದು, ಸಮಾಜಸೇವೆ ಕ್ಷೇತ್ರದಲ್ಲಿಯೂ ವೃದ್ಧಾಶ್ರಮಗಳು, ಆಸ್ಪತ್ರೆಗಳು, ಅನಾಥಾಶ್ರಮಗಳು ಹಾಗೂ ಪುನರ್ವಸತಿ ಕೇಂದ್ರಗಳನ್ನು ನಡೆಸುವ ಮೂಲಕ ಮಹತ್ವದ ಸೇವೆ ಸಲ್ಲಿಸುತ್ತಿದೆ. ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಡುಪಿ ಧರ್ಮಕ್ಷೇತ್ರವು ಮಹತ್ವದ ಪಾತ್ರವಹಿಸಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಕಾರ್ಯಕ್ರಮದ ಸಂಚಾಲಕರು ಹಾಗೂ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಧರ್ಮಗುರುಗಳಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕುಲಪತಿಗಳಾದ ವಂ|ಸ್ಟೀವನ್ ಡಿಸೋಜಾ, ಮಾಧ್ಯಮ ಸಂಯೋಜಕರಾದ ಮೈಕಲ್ ರೊಡ್ರಿಗಸ್ ಉಪಸ್ಥಿತರಿದ್ದರು.