ಅತ್ತೂರು: ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ಅಪರಿಚಿತ ಮನುಷ್ಯನನ್ನು ಎತ್ತಿ, ಉಪಚರಿಸಿ ಶುಶ್ರೂಷೆ ಮಾಡುವ ಸೇವಕನಂತೆ ನಾವು ಕೂಡ ಧರ್ಮ, ಗಡಿ ಹಾಗೂ ಸಂಸ್ಕೃತಿಯ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು ಎಂದು ಮಂಗಳೂರು ಧರ್ಮಪ್ರಾಂತದ ನಿವೃತ್ತ ಧರ್ಮಾಧ್ಯಕ್ಷ ಅಲೋಶಿಯಸ್ ಪಾವ್ಲ್ ಡಿಸೋಜಾ ಅಭಿಪ್ರಾಯಪಟ್ಟರು.
ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವದ ಎಂಟನೇ ದಿನವಾದ ಸೋಮವಾರ ಪ್ರಮುಖ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಎಂಟನೇ ದಿನವಾದ ಸೋಮವಾರದಂದು ನಿಗದಿತ ಐದು ಬಲಿಪೂಜೆಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ನೂರಾರು ಭಕ್ತರು ಸಂತ ಲಾರೆನ್ಸರ ಪವಿತ್ರ ಅವಶೇಷವನ್ನು ವೀಕ್ಷಿಸಿ ದರ್ಶನ ಪಡೆದರು. ಕಥೋಲಿಕ್ ಸಭಾ ಹಾಗೂ ಮಹಿಳಾ ಸಂಘಟನೆಯ ಸದಸ್ಯರು ಸ್ವಯಂಸೇವಕರಾಗಿ ಭಕ್ತಾದಿಗಳಿಗೆ ಮಾರ್ಗದರ್ಶನವನ್ನು ನೀಡಿದರು.
ದಿನದ ಪ್ರಮುಖ ಬಲಿಪೂಜೆಯನ್ನು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಅಲೋಷಿಯಸ್ ಪಾವ್ಲ್ ಡಿಸೋಜಾ ನೆರವೇರಿಸಿ ಪ್ರಬೋಧನೆಯನ್ನು ನೀಡಿದರು. ಇತರ ಬಲಿಪೂಜೆಗಳನ್ನು ಉದ್ಯಾವರದ ಸಹಾಯಕ ಗುರು ಫಾದರ್ ರಾಲ್ವಿನ್ ಆರಾನ್ಹಾ, ಬೊಂದೆಲ್ನ ಸಹಾಯಕ ಗುರು ಫಾದರ್ ರೂಪೇಶ್ ತಾವ್ರೊ, ಶಿರ್ವಾದ ಮುಖ್ಯಗುರು ಫಾದರ್ ಡೆನಿಸ್ ಡೆಸಾ ಹಾಗೂ ಫಜೀರಿನ ಮುಖ್ಯಗುರು ಫಾದರ್ ಸುನಿಲ್ ವೇಗಸ್ರವರು ನೆರವೇರಿಸಿದರು.
ಮಂಗಳವಾರ ಮಹೋತ್ಸವದ ಒಂಭತ್ತನೇ ದಿನದ ಕಾರ್ಯಕ್ರಮಗಳು: ಬೆಳಗ್ಗೆ 10 ಗಂಟೆಗೆ ಕನ್ನಡ ಭಾಷೆಯಲ್ಲಿ ಸಂಭ್ರಮದ ಬಲಿಪೂಜೆ – ಬೆಳ್ತಂಗಡಿಯ ಧರ್ಮಾಧ್ಯಕ್ಷ ಪರಮಪೂಜ್ಯ ಲಾರೆನ್ಸ್ ಮುಕ್ಕುಝಿ ನೆರವೇರಿಸಲಿದ್ದಾರೆ. ಉಳಿದಂತೆ ಬೆಳಗ್ಗೆ 8, 12 ಹಾಗೂ ಮಧ್ಯಾಹ್ನ 3 ಮತ್ತು ಸಂಜೆ 5 ಗಂಟೆಯ ಬಲಿಪೂಜೆಗಳು ಎಂದಿನಂತೆ ನೆರವೇರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾದರ್ ಚೇತನ್ ತಿಳಿಸಿದ್ದಾರೆ.