ಉಡುಪಿ: ಕನ್ನಡ ನಾಡಿನ ಜನತೆಯ ಸಮಗ್ರ ಅಭಿವೃದ್ಧಿಗಾಗಿ ಡಬಲ್ ಇಂಜಿನ್ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಮೀನುಗಾರರಿಗೆ ಅಗತ್ಯವಿರುವ ಹೆಚ್ಚುವರಿ ಸೀಮೆಎಣ್ಣೆ ಒದಗಿಸಲು ನಮ್ಮ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಹಾಗೂ ಮೀನುಗಾರರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರದಂದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಜನಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕರಾವಳಿ ಪ್ರದೇಶದ ಅಭಿವೃದ್ಧಿಗೆ ನರೇಂದ್ರ ಮೋದಿಯವರ ಸರ್ಕಾರ ಬಹಳಷ್ಟು ಕೊಡುಗೆ ನೀಡಿದೆ. ಕರಾವಳಿಗರ ಬಹುದಿನಗಳ ಬೇಡಿಕೆಯಾಗಿದ್ದ ಸಿ.ಆರ್.ಝೆಡ್ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ಸಾಗರ್ ಮಾಲಾ ಯೋಜನೆಗೆ 1774 ಕೋಟಿ ರೂ ಅನುದಾನ ನೀಡುವ ಮೂಲಕ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.
ಇಂದು ಸಾಮಾಜಿಕ ನ್ಯಾಯ ಭಾಷಣದ ಸರಕಾಗಿದೆ. ಕಾಂಗ್ರೆಸ್ ಪಕ್ಷ ಕೆಲವು ಸಮುದಾಯಗಳನ್ನು ಕೇವಲ ಭಾಷಣದಿಂದಲೇ ಹೊಟ್ಟೆ ತುಂಬಿಸುತ್ತಾ ಬಂದಿದೆ. ಸಿದ್ದರಾಮಯ್ಯ ಅವರಂತಹ ನಾಯಕರು ಸಾಮಾಜಿಕ ನ್ಯಾಯದ ಹೆಸರಿನಲ್ಲಿ ತಾವೇ ಮುಂದುವರಿದಿದ್ದಾರೆಯೇ ಹೊರತು ಯಾರನ್ನೂ ಬೆಳೆಯಲು ಬಿಟ್ಟಿಲ್ಲ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಜನಸಂಕಲ್ಪ ಯಾತ್ರೆ ಕಲ್ಯಾಣ ಕರ್ನಾಟಕದಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಕರಾವಳಿಯಲ್ಲಿ ಇಂದು ಕಾಪು ಕ್ಷೇತ್ರದಿಂದ ಪ್ರಾರಂಭವಾಗಿದೆ. ನಾವು ಪ್ರತಿಯೊಂದು ಕ್ಷೇತ್ರವನ್ನೂ ತಲುಪಲಿದ್ದೇವೆ ಮತ್ತು ಅಲ್ಲೆಲ್ಲ ಪಕ್ಷದ ಹಾಗೂ ಜನರ ಸಂಘಟನೆಯನ್ನು ಮಾಡಲಿದ್ದೇವೆ. ನಮಗೆ ಎಲ್ಲೆಡೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಜನಸಂಕಲ್ಪ ಯಾತ್ರೆ ಪ್ರಾರಂಭವಾದ ಬಳಿಕ ಪಕ್ಷದ ಅಲೆ ಗೆದ್ದಿರುವುದನ್ನು ನಾವು ಕಾಣುತ್ತಿದ್ದೇವೆ. ಕಾರ್ಯಕರ್ತರಲ್ಲೂ ಹೊಸ ಉತ್ಸಾಹ ಮೂಡುತ್ತಿದೆ. ಯಾತ್ರೆ ಮುಗಿದ ಬಳಿಕ ಉತ್ತರ ಮತ್ತು ದಕ್ಷಿಣ ಭಾಗದಿಂದ ರಥಯಾತ್ರೆ ಪ್ರಾರಂಭಿಸಲಿದ್ದು ಎಲ್ಲ 224 ಕ್ಷೇತ್ರಗಳನ್ನೂ ಕೂಡಾ ಈ ಮೂಲಕ ಮುಟ್ಟಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ವಿ. ಸುನಿಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಯಶ್ಪಾಲ್ ಸುವರ್ಣ,ಪಕ್ಷದ ವಿವಿಧ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.