ಕೆಥೊಲಿಕ್ ಸಭಾ ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿದೆ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸವನ್ನು ಕೆಥೊಲಿಕ್ ಸಭಾ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ  ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಭಾನುವಾರ ಉಡುಪಿ ಶೋಕ ಮಾತಾ ಇಗರ್ಜಿಯ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೆಥೊಲಿಕ್ ಸಭಾ ಸಂಘಟನೆ ಕಳೆದ ಎಂಟು ವರ್ಷಗಳಿಂದ ಸಮಾಜದಲ್ಲಿ ಉತ್ತಮ ಸೇವೆಯನ್ನು ನೀಡಿಕೊಂಡು ಬಂದಿದ್ದು ದೇಶದಲ್ಲಿಯೇ ಮಾದರಿಯಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಘಟನೆ ನೀಡಿದ ಸೇವೆ ಶ್ಲಾಘನಾರ್ಹವಾಗಿದ್ದು, ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ನೀಡಿದೆ. ಸಮುದಾಯದ ಅಭಿವೃದ್ದಿಯ ನಿಟ್ಟಿನಲ್ಲಿ ಈ ಸೇವೆ ಮುಂದುವರೆಯಲಿ ಎಂದರು.

ಈ ಸಂದರ್ಭದಲ್ಲಿ ಬರಹಗಾರ ರಿಚ್ಚಾರ್ಡ್ ದಾಂತಿ ಪಾಂಬೂರ್ ಅವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.  ದಿ. ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಮರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. 2020-21 ನೇ ವರ್ಷದ ಡೈರಕ್ಟರಿಯ ಅನಾವರಣ ಕಾರ್ಯಕ್ರಮ ನಡೆಯಿತು.

ಸಂಘಟನೆಯ ಅಧ್ಯಕ್ಷ ರೋಬರ್ಟ್ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ಕಾರ್ಯದರ್ಶಿ ಗ್ರೆಗೋರಿ ಪಿಕೆ ಡಿಸೋಜಾ ಕಳೆದ ಬಾರಿಯ ವಾರ್ಷಿಕ ವರದಿ ಹಾಗೂ ಪ್ರಸ್ತಕ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್,  ಮಾನಸ ಸಂಸ್ಥೆಯವರದಿಯನ್ನು ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಟ್ರಸ್ಟ್ ವರದಿಯನ್ನು ಆಲಿಸ್ ರೊಡ್ರಿಗಸ್ ಮಂಡಿಸಿದರು.

ಕರ್ನಾಟಕ ರಾಜ್ಯ ಗೋಡಂಬಿ ಉತ್ಪಾದಕರ
ಸಭೆಯಲ್ಲಿ ಸಂಘದ ಅಧ್ಯಕ್ಷ ಸಂತೋಶ್ ಡಿಸಿಲ್ವಾ ಕಾರ್ಕಳ, ಕೆಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷರಾದ ಮೇರಿ ಡಿಸೋಜಾ, ಸಶಕ್ತ ಸಮುದಾಯ ಟ್ರಸ್ಟ್ ಸಂಚಾಲಕರಾದ ವಾಲ್ಟರ್ ಸಿರಿಲ್ ಪಿಂಟೊ, ವಲಯಾಧ್ಯಕ್ಷರುಗಳಾದ ಮೇಬಲ್ ಡಿಸೋಜಾ ಕುಂದಾಪುರ, ರೋಸಿ ಬಾರೆಟ್ಟೊ ಕಲ್ಯಾಣಪುರ, ಸೊಲೋಮನ್ ಆಲ್ವಾರಿಸ್ ಕಾರ್ಕಳ, ಐಡಾ ಕರ್ನೆಲಿಯೋ ಶಿರ್ವಾ, ರೊನಾಲ್ಡ್ ಆಲ್ಮೇಡಾ ಉಡುಪಿ ಉಪಸ್ಥಿತರಿದ್ದರು.

ರೋಬರ್ಟ್ ಮಿನೇಜಸ್ ಸ್ವಾಗತಿಸಿದರು. ಸಂತೋಷ್ ಕರ್ನೆಲಿಯೊ ವಂದಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.