ಬೆಂಗಳೂರು: ಕೊರೊನಾ ಮೂರನೇ ಅಲೆಯ ಭೀತಿಯ ನಡುವೆಯೇ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಇಂದು ನಡೆದ ತಜ್ಞರ ಜತೆಗಿನ ಸಭೆಯ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಶಾಲೆಗಳ ಆರಂಭದ ಕುರಿತು ತಜ್ಞರ ಜತೆ ಚರ್ಚಿಸಲಾಗಿದ್ದು, ಇದೇ 23ರಿಂದ 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸಲಾಗುವುದು ಎಂದರು.
ಎರಡು ಪ್ರತ್ಯೇಕ ವಿದ್ಯಾರ್ಥಿಗಳ ಗುಂಪು ರಚಿಸಿಕೊಂಡು ತರಗತಿ ನಡೆಸಲು ನಿರ್ಧರಿಸಲಾಗಿದೆ. ದಿನ ಬಿಟ್ಟು ದಿನ ತರಗತಿ ನಡೆಯಲಿದೆ. ಒಂದರಿಂದ ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭ ಕುರಿತು ತೀರ್ಮಾನಿಸಿಲ್ಲ. ಆಗಸ್ಟ್ ಅಂತ್ಯದಲ್ಲಿ ಮತ್ತೊಮ್ಮೆ ಸಭೆ ನಡೆಸಿ ಕೋವಿಡ್ ಸ್ಥಿತಿಗತಿ ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.












