ಶ್ರೀನಗರ: ಇಲ್ಲಿನ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಿ ಭಯೋತ್ಪಾದಕ ಸಂಘಟನೆಗಳಿಗೆ ಸೇರಿಸುತ್ತಿದ್ದ ಮೂವರು ಶಿಕ್ಷಕರನ್ನು ರಾಷ್ಟ್ರೀಯ ತನಿಖಾ ತಂಡದ (ಐಎನ್ ಎ) ಪೊಲೀಸರು ಬಂಧಿಸಿದ್ದಾರೆ.
ಶ್ರೀನಗರದ ಮೂವರು ಶಿಕ್ಷಕರಾದ ಅಬ್ದುಲ್ ಅಹಾದ್ ಭಟ್, ಮಹಮ್ಮದ್ ಯೂಸುಫ್ ವಾನಿ ಮತ್ತು ರೌಫ್ ಭಟ್ ಎಂಬುವವರನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇವರು ಮದರಸಾಗಳಲ್ಲಿ ಉಗ್ರ ಸಂಘಟನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು ಎನ್ನಲಾಗಿದೆ.
ಶೋಪಿಯಾನ್ ಜಿಲ್ಲೆಯಲ್ಲಿ 13 ವಿದ್ಯಾರ್ಥಿಗಳು ಕಣ್ಮರೆಯಾಗಿದ್ದು, ಅವರನ್ನು ಪತ್ತೆ ಹಚ್ಚುವಾಗ ಈ ವಿಷಯ ಹೊರಬಂದಿದೆ.
ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳ ಚಟುವಟಿಕೆ ಮೇಲೆ ಗಮನ ಇಟ್ಟಿದ್ದ ಗುಪ್ತಚರ ಇಲಾಖೆ 13 ವಿದ್ಯಾರ್ಥಿಗಳನ್ನು ಉಗ್ರಗಾಮಿ ಸಂಘಟನೆಗೆ ಸೇರಿಸಿರುವುದು ತಿಳಿದುಬಂದಿತ್ತು.
ಇದರ ಆಧಾರದ ಮೇಲೆ ತನಿಖೆ ಮುಂದುವರಿದಿತ್ತು. ಈ ಶಾಲೆ ನಿಷೇಧಿತ ಜಮಾತ್ ಎ ಇಸ್ಲಾಮಿ ಸಂಘಟನೆಯ ಅಂಗ ಸಂಸ್ಥೆಯಾಗಿದೆ ಎಂದು ತಿಳಿದುಬಂದಿದೆ.