ನವದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರ ಬಂಧನಕ್ಕೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ, ರವಿಶಂಕರ ಪ್ರಸಾದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಜಾವಡೇಕರ್, ಇದು ಮಹಾರಾಷ್ಟ್ರ ಸರ್ಕಾರ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಸಿದ ದಾಳಿ. ತುರ್ತುಪರಿಸ್ಥಿತಿ ದಿನಗಳನ್ನು ನೆನಪಿಸುತ್ತದೆ ಎಂದು ಹರಿಹಾಯ್ದಿದ್ದಾರೆ.
ಅರ್ನಬ್ ಬಂಧನ ಖಂಡಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ, ‘ಪತ್ರಿಕಾ ಸ್ವಾತಂತ್ರ್ಯದ ಪರ ನಿಲ್ಲುವವರು, ಈ ಕ್ರಮವನ್ನು ಖಂಡಿಸಬೇಕು. ಇಲ್ಲದಿದ್ದರೆ, ನೀವು ಮೌನವಾಗಿ ಫ್ಯಾಸಿಸಂ ಅನ್ನು ಬೆಂಬಲಿಸುತ್ತೀರಿ ಎಂದು ಅರ್ಥವಾಗುತ್ತದೆ. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪರವಿದ್ದೀರಿ ಎಂದಾಗುತ್ತದೆ. ನೀವೇ ಮೌನವಾಗಿದ್ದರೆ, ಮುಂದೆ ನಿಂತು ಯಾರು ಮಾತನಾಡುತ್ತಾರೆ ಎಂದು ಮಾಧ್ಯಮದವರನ್ನು ಪಶ್ನಿಸಿದ್ದಾರೆ.