ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಆರೋಪಿ ನಿರಂಜನ್ ಭಟ್ ಗೆ ನಾಲ್ಕು ವರ್ಷಗಳ ಬಳಿಕ 15 ದಿನಗಳ‌ ಜಾಮೀನು ಮಂಜೂರು

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ 2016ರಲ್ಲಿ ನಡೆದ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ನಂದಳಿಕೆಯ ನಿರಂಜನ್ ಭಟ್(30)ಗೆ ಉಡುಪಿ ನ್ಯಾಯಾಲಯ 15 ದಿನಗಳ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ನಿರಂಜನ್ ಭಟ್ ತಂದೆ ಹಾಗೂ ಪ್ರಕರಣದ ಸಾಕ್ಷನಾಶ ಆರೋಪಿ ಶ್ರೀನಿವಾಸ ಭಟ್ ಜೂನ್ 22ರಂದು ಅನಾರೋಗ್ಯದಿಂದ ನಿಧನರಾಗಿದ್ದರು. ನಿರಂಜನ್  ಕಳೆದ ನಾಲ್ಕು ವರ್ಷಗಳಿಂದ ಜಾಮೀನು ಸಿಗದೆ ಜೈಲಿನಲ್ಲಿದ್ದಾನೆ. ಈತ ಶ್ರೀನಿವಾಸ್ ಭಟ್ ಅವರ ಏಕೈಕ ಪುತ್ರನಾಗಿರುವುದರಿಂದ, ಧಾರ್ಮಿಕ ಕಾರ್ಯ ನೆರವೇರಿಸಲು ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೂ.23ರಂದು ಹಾಗೂ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜೂ.24ರಂದು ಜಾಮೀನು ನೀಡಿದೆ. ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಿರಂಜನ್ ಜೂ.25ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
2016ರ ಜು.28ರಂದು ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಅವರ ಪತ್ನಿ ಹಾಗೂ ಮಗನೊಂದಿಗೆ ಸೇರಿ ನಿರಂಜನ್ ಭಟ್ ಕೊಲೆ ಮಾಡಿ ಸುಟ್ಟು ಹಾಕಿದ್ದನು ಎಂದು ಪ್ರಕರಣ ದಾಖಲಾಗಿದೆ.
ಆ.8ರಂದು ಪೊಲೀಸರಿಂದ ಬಂಧಿತನಾಗಿದ್ದ ನಿರಂಜನ್ ಭಟ್ ಗೆ ಇದೀಗ ನಾಲ್ಕು ವರ್ಷಗಳ ನಂತರ ಜಾಮೀನು ದೊರೆತಿದೆ.