ಉಡುಪಿ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ಆಸ್ಪತ್ರೆಯು ತನ್ನ 31ನೇ ವರ್ಷದ ಪೂರ್ಣೋತ್ಸವವನ್ನು ಮೇ 5ರಂದು ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಆಚರಿಸಿಕೊಳ್ಳುತ್ತಿದೆ.
ಅಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12:30ರ ವರೆಗೆ ಗಾಂಧಿ ಆಸ್ಪತ್ರೆ ಆವರಣದಲ್ಲಿ ಮೆಗಾ ರಕ್ತದಾನ ಶಿಬಿರ ನಡೆಯಲಿದ್ದು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಸದಸ್ಯರು ಭಾಗವಹಿಸಿ ರಕ್ತದಾನ ಮಾಡಲಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಉದ್ಘಾಟಿಸಲಿದ್ದಾರೆ. ಭಾರತೀಯ ವೈದ್ಯ ಮಂಡಳಿಯ ಉಡುಪಿ-ಕರಾವಳಿ ಘಟಕದ ಅಧ್ಯಕ್ಷ ಡಾ. ಅಶೋಕ್ ಕಾಮತ್, ಉಡುಪಿಯ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಗಾಂಧಿ ಆಸ್ಪತ್ರೆಯ ಸ್ಥಾಪಕ ಹರಿಶ್ಚಂದ್ರ ಹಾಗೂ ಜಿಲ್ಲಾ ರಕ್ತನಿಧಿ ಮುಖ್ಯಸ್ಥೆ ಡಾ. ವೀಣಾಕುಮಾರಿ ಪಾಲ್ಗೊಳ್ಳಲಿದ್ದಾರೆ.

ಛಾಯಾಚಿತ್ರ ಪ್ರದರ್ಶನ
ಗಾಂಧಿ ಆಸ್ಪತ್ರೆಯ ವೈದ್ಯ ಹಾಗೂ ವೈದ್ಯಕೀಯ ನಿರ್ದೆಶಕ ಡಾ. ವ್ಯಾಸರಾಜ ತಂತ್ರಿ ಛಾಯಾಗ್ರಹಣದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಹವ್ಯಾಸಿ ಛಾಯಾಗ್ರಾಹಕರೂ ಆಗಿದ್ದಾರೆ. ಅವರು ಆಯೋಜಿಸಿರುವ ‘ಬಹುಚಿತ್ರ ಜಗತ್’ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ಪ್ರದರ್ಶಿಸಲ್ಪಡುವ ಛಾಯಾಚಿತ್ರಗಳ ಮಾರಾಟದಿಂದ ಸಂಗ್ರಹವಾಗುವ ಮೊತ್ತವನ್ನು ಹೋಮ್ ಡಾಕ್ಟರ್ ಫೌಂಡೇಷನ್ಗೆ ದಾನ ಮಾಡುವ ಉದ್ದೇಶ ಹೊಂದಲಾಗಿದೆ.

















