ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ: ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ ಬೆಡ್ ಒದಗಿಸಲು ಆಗಲ್ಲ; ಡಿಸಿ ಎಚ್ಚರಿಕೆ

ಉಡುಪಿ: ಕೊರೊನಾ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಗೆ ಒಳಪಡಬೇಕು. ಸೋಂಕು ಉಲ್ಬಣಗೊಂಡ ಬಳಿಕ ಮನೆಯಿಂದ ನೇರವಾಗಿ ಆಸ್ಪತ್ರೆಗೆ ಬಂದರೆ, ಅಂತಹ ರೋಗಿಗಳಿಗೆ ವೆಂಟಿಲೇಟರ್ ಬೆಡ್ ಒದಗಿಸಲು ಆಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಜಿಲ್ಲೆಯಲ್ಲಿ ಶೇ.90ರಷ್ಟು ಮಂದಿಗೆ ಆಸ್ಪತ್ರೆಯ ಅಗತ್ಯ ಇರುವುದಿಲ್ಲ. ಕೇವಲ ಶೇ.10 ಮಂದಿಗೆ ಮಾತ್ರ ಅಗತ್ಯ ಇರುತ್ತದೆ. ಅಂತಹ ಶೇ.10 ಮಂದಿಗೆ ಜಿಲ್ಲಾಡಳಿತ ಬೆಡ್ ಕೊಡಲು ಸಿದ್ಧ ಇದೆ. ಅದರಲ್ಲಿ ಶೇ.1 ಮಂದಿಗೆ ಐಸಿಯು ಮತ್ತು ಶೇ.2ರಷ್ಟು ಮಂದಿಗೆ ಆಕ್ಸಿಜನ್ ಅಗತ್ಯ ಇರುತ್ತದೆ ಎಂದು ಹೇಳಿದರು.

ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ನಾವು ಸಿದ್ಧತೆ ಮಾಡಲು ಆಗುವುದಿಲ್ಲ. ಕೆಲವರು ಅವರ ಜೀವದ ಜೊತೆ ಅವರೇ ಆಟ ಆಡುತ್ತಿದ್ದಾರೆ. ಆ ರೀತಿ ಬಂದರೆ ನಮ್ಮಲ್ಲಿ ಎಷ್ಟು ಬೆಡ್‌ಗಳಿದ್ದರೂ ಸಾಕಾಗುವುದಿಲ್ಲ ಎಂದರು.
ಜಿಲ್ಲೆಯಲ್ಲಿ 1300ಕ್ಕಿಂತ ಹೆಚ್ಚು ಆಕ್ಸಿಜನ್ ಬೆಡ್‌ಗಳು ಈಗ ಲಭ್ಯ ಇವೆ. ಅದರಲ್ಲಿ 350 ಬೆಡ್‌ಗಳು ಭರ್ತಿ ಆಗಿವೆ. ಸಾರ್ವಜನಿಕರು ಆಸ್ಪತ್ರೆಗೆ ಬಾರದೆ ಹೋಮ್ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆದು ಗುಣಮುಖ ಆಗಲು ಸಾಧ್ಯ ಇದೆ. ಆದರೆ ಹೆದರಿ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಬೆಡ್‌ಗಳಿಗೆ ಯಾವುದೇ ಕೊರತೆ ಇಲ್ಲ. ಜನ ಬೆಡ್ ಇಲ್ಲ ಎಂದು ಹೆದರುವ ಅಗತ್ಯ ಇಲ್ಲ ಎಂದು ಅವರು ತಿಳಿಸಿದರು.

ಉಡುಪಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ತಮ್ಮ ಮನೆಗಳಲ್ಲಿ ಐಸೋಲೇಷನ್‌ಗೆ ಸರಿಯಾದ ವ್ಯವಸ್ಥೆ ಇಲ್ಲದವರು ಈ ಕೋವಿಡ್ ಸೆಂಟರ್‌ಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಇಲ್ಲಿ ವೈದ್ಯರುಗಳು ಕೂಡ ಇರುತ್ತಾರೆ. ಅದಕ್ಕೆ ಕಾಲ್‌ಸೆಂಟರ್ ಮೂಲಕ ಬಂದು ಇಲ್ಲಿ ದಾಖ ಲಾಗಬಹುದು. ಇಲ್ಲಿ ಸುರಕ್ಷಿತವಾಗಿರಬಹುದು. ಅದೇ ರೀತಿ ಕೋವಿಡ್ ಕಾಲ್‌ಸೆಂಟರ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಆಯ್ಯುಷ್ಮಾನ್ ಭಾರತ್ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದರು.