ಉಡುಪಿ: ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಟೆಂಟ್‍ನಲ್ಲಿ ವಾಸವಾಗಿರುವ, ಮೂಲತಃ ಗದಗದವರಾಗಿರುವ 7 ಜನ ಕೂಲಿ ಕಾರ್ಮಿಕರನ್ನು ಒಳಗೊಂಡಂತೆ 12 ಮಕ್ಕಳನ್ನು ರಕ್ಷಿಸಲು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಉಡುಪಿ ಮತ್ತು ನಗರ ಪೊಲೀಸ್ ಠಾಣೆ, ಉಡುಪಿ ಇದರ ಜಂಟಿ ಕಾರ್ಯಾಚರಣೆ ನಡೆಸಲಾಯಿತು.
ಅವರಲ್ಲಿ 2 ಮಕ್ಕಳು ಕಾಡಬೆಟ್ಟು ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದು, ಮಕ್ಕಳು ರಸ್ತೆ ಬದಿಗೆ ಆಟವಾಡಲು ಬರುತ್ತಿದ್ದು, ವಾಹನ ಸಂಚಾರದ ವೇಳೆ ಆಕಸ್ಮಾತ್ತಾಗಿ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಅಲ್ಲಿಂದ ಬೇರೆ ಕಡೆ ಟೆಂಟನ್ನು ವರ್ಗಾಯಿಸುವಂತೆ ಸೂಚಿಸಿ, ಅವರಿಗೆ ಅನುಕೂಲಕರ ಮತ್ತು ಮಕ್ಕಳ ರಕ್ಷಣೆ ಹಿನ್ನೆಲೆಯಲ್ಲಿ ನಿಟ್ಟೂರಿನಲ್ಲಿ ರಸ್ತೆಗೆ ಸ್ವಲ್ಪ ದೂರವಿರುವ ಜಾಗದಲ್ಲಿ ಟೆಂಟ್‍ನ್ನು ಕಟ್ಟಿಕೊಳ್ಳುವಂತೆ ಸ್ಥಳವನ್ನು ತೋರಿಸಿ, 3 ದಿನಗಳ ಕಾಲಾವಕಾಶವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ನೀಡಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದಯಾನಂದ ಮತ್ತು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತರಾದ ಯೋಗೀಶ್ ಹಾಗೂ ಗ್ಲೀಶಾ ಮೊಂತೆರೋ ಹಾಗೂ ಉಡುಪಿ ನಗರ ಠಾಣೆಯ ಪೊಲೀಸ್ ಜಿ.ಎಸ್ ಶಿವಮಠ್ ಭಾಗವಹಿಸಿದ್ದರು.