ಪಾಕ್‌ ನಮ್ಮ ಮೇಲೆ ಬಾಂಬ್‌ ಹಾಕುವುದು ಬಿಡಿ, ಎರಡು ಟೊಮೆಟೋ ಕೂಡಾ ಅವರಿಗೆ ಸಿಗದ ಸ್ಥಿತಿ ಬಂದಿದೆ: ಚಕ್ರವರ್ತಿ ಸೂಲಿಬೆಲೆ

ಭಾರತವು ಪಾಕಿಸ್ತಾನದ ಜೊತೆ ನೇರ ಯುದ್ಧ ಮಾಡಬೇಕಾದ ಅಗತ್ಯ ಇಲ್ಲ. ಬೇರೆ ಬೇರೆ ಕಾರಣಗಳಿಂದ ಪಾಕ್ ಅನ್ನು ಕುಗ್ಗಿಸಬಹುದು. ಈಗಾಗಲೇ ರೈತರು ಪಾಕ್ ಗೆ ಟೊಮೆಟೋ ರಪ್ತು ನಿಲ್ಲಿಸಿ ತಮ್ಮ ದೇಶ ಪ್ರೇಮ‌ ಮೆರೆದಿದ್ದಾರೆ. ಪಾಕ್‌ ನಮ್ಮ ಮೇಲೆ ಬಾಂಬ್‌ ಹಾಕುವುದು ಬಿಡಿ ಎರಡು ಟೊಮೆಟೋ ಕೂಡಾ ಅವರಿಗೆ ಸಿಗದ ಸ್ಥಿತಿ ಬಂದಿದೆ ಎಂದು ಟೀಮ್ ಮೋದಿ‌ ಸಂಸ್ಥಾಪಕ‌ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕುಂದಾಪುರದ ಕುಂದೇಶ್ವರ ಮುಖ್ಯದ್ವಾರದ ಎದುರು ಸೋಮವಾರ ಸಂಜೆ ಟೀಮ್‌ ಮೋದಿ ಕುಂದಾಪುರ ವತಿಯಿಂದ ನಡೆದ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೀಗ ಪಾಕಿಸ್ತಾನದ ಹಣಕಾಸು ಸ್ಥಿತಿ ತೀರಾ ಹದಗೆಟ್ಟಿದ್ದು ದಿವಾಳಿ ಅಂಚಿನಲ್ಲಿದೆ. ಪಾಕಿಸ್ತಾನವನ್ನು ಜಗತ್ತಿನ ಯಾವುದೇ ರಾಷ್ಟ್ರ ಬೆಂಬಲಿಸುತ್ತಿಲ್ಲ, ಬೆಂಬಲ ಕೊಡುವ ಚೀನಾವೂ ಹಿಂದೆ ಸರಿದಿದೆ. ಇದಕ್ಕೆಲ್ಲಾ ಮೋದಿಯವರ ದೂರಗಾಮಿ ಚಿಂತನೆಯುಳ್ಳ ರಾಜತಾಂತ್ರಿಕ ನಡೆ ಕಾರಣವಾಗಿದೆ ಎಂದರು.
ಪಾಕ್‌ ಭಾರತಕ್ಕೆ ಹೆದರುತ್ತಿದೆ. ದಾಳಿ ಮಾಡಿದ ಜೈಷೆ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಈಗಾಗಲೇ ಪ್ರತಿಕಾರದ ನಿರಿಕ್ಷೆಯಲ್ಲಿ ಹೆದರಿದ್ದಾನೆ. ಮೋದಿಯವರು ರಾಜತಾಂತ್ರಿಕ ನಡೆ ಮೂಲಕ ನಮ್ಮ ದೇಶದ ವರ್ಚಸ್ಸು ಹೆಚ್ಚಿಸಿದ್ದಾರೆ. ಸೈನಿಕರಿಗೆ ಒನ್‌ ರ್ಯಾಂಕ್ ಒನ್‌ ಪೆನ್ಶನ್ ಅನುಷ್ಠಾನ ಮಾಡಲಾಗಿದೆ. ಬಡವರ ಪರ ನಿಂತಿರುವ ಪ್ರಧಾನಿ‌ ಮೋದಿ ಕಪ್ಪು ಹಣಕೂಡಿಟ್ಟ ಶ್ರೀಮಂತರು, ಸಾಲ ವಂಚಿಸಿ ವಿದೇಶಕ್ಕೆ ಹಾರಿದವರು, ಭ್ರಷ್ಟ ರಿಗೆ ಸಿಂಹಸ್ವಪ್ನರಾಗಿದ್ದಾರೆ. ಭ್ರಷ್ಟಚಾರದಲ್ಲಿ ತೊಡಗಿ ದೇಶ ಲೂಟಿ ಮಾಡಿದವರೆಲ್ಲ ಈಗ ಮೋದಿ ಸೋಲಿಗಾಗಿ ಒಂದಾಗಿದ್ದಾರೆ. ಜೈಲು ಸೇರುವ ಭಯದಿಂದ ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಿಕ ಪಕ್ಷಗಳೆದುರು ಮಂಡಿಯೂರಿದೆ‌ ಎಂದು ವ್ಯಂಗ್ಯವಾಡಿದ ಅವರು 2004ರಲ್ಲಿ ಅಟಲ್‌ಜೀ ಅವರನ್ನು ಸೋಲಿಸಿ ಮಾಡಿದ ತಪ್ಪನ್ನು ಮತ್ತೆ ಮಾಡುವುದು ಬೇಡ. ಮೋದಿಯನ್ನು ಗೆಲ್ಲಿಸುವ ಮೂಲಕ ದೇಶವನ್ನು ಗೆಲ್ಲಿಸೋಣ ಎಂದು ಕರೆಕೊಟ್ಟರು.
ವಾಯುಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಾಮಣ್ಣ ಶೆಟ್ಟಿ ಹೊಸ್ಮಠ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮಣ್ಣ ಶೆಟ್ಟಿ,  ಮೋದಿಯವರಿಂದಾಗಿ ಇಂದು ನಿವೃತ್ತ ಯೋಧರು ಕೂಡಾ ಉತ್ತಮ ನಿವೃತ್ತಿ ವೇತನ ಪಡೆವಂತಾಗಿದೆ. ಸೇನೆ ಸೇರುವ ಯೋಧರಿಗೆ ಕೂಡಾ ಈಗ ಉತ್ತಮ ವೇತನ ಇದೆ. ವಿದೇಶಗಳು ಕೂಡಾ ಮೋದಿಯವರನ್ನು ಹಾಡಿ ಹೊಗಳುತ್ತವೆ. ನಮ್ಮಲ್ಲಿ ಕೆಲವರು ಮೋದಿಯವರನ್ನು ಟೀಕಿಸುತ್ತಿದ್ದು ಅವರಿಗೆ ಯೋಗ್ಯತೆ ಇಲ್ಲ. ಆದ್ದರಿಂದ ಮೋದಿ ಇನ್ನೊಮ್ಮೆ ಅನಿವಾರ್ಯ ಎಂದರು.