ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದ ಕ್ಷಣ: ಇಂದು 1983 ರ ವಿಶ್ವ ಕಪ್ ಗೆದ್ದ ದಿನ

ನವದೆಹಲಿ: ಬರೋಬ್ಬರಿ 39 ವರ್ಷಗಳ ಹಿಂದೆ ಅವಿಸ್ಮರಣೀಯ ದಾಖಲೆಯೊಂದು ನಡೆದ ದಿನವಿದು. ಮೂರು ದಶಕಗಳ ಹಿಂದೆ ವಿಶ್ವ ಛಾಂಪಿಯನ್ ವೆಸ್ಟ್ ಇಂಡೀಸಿನ ಧಾಂಡಿಗರನ್ನು ಸೋಲಿಸಿ ಕ್ರಿಕೆಟ್ ವಿಶ್ವಕಪ್ ಅನ್ನು ಎತ್ತಿ ಹಿಡಿದು ಸಮಸ್ತ ಭಾರತೀಯರು ಹೆಮ್ಮ ಪಡುವಂತೆ ಮಾಡಿದ ದಿನ ಜೂನ್ 25.

1983 ರಲ್ಲಿ ಈ ದಿನದಂದು, ಭಾರತೀಯ ಕ್ರಿಕೆಟ್ ತಂಡವು ಎಲ್ಲಾ ಅಡೆತಡೆ ಮತ್ತು ನಿರೀಕ್ಷೆಗಳನ್ನು ಮೀರಿ ಐತಿಹಾಸಿಕ ಲಾರ್ಡ್ಸ್‌ ಗ್ರೌಂಡ್ ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ 43 ರನ್‌ಗಳಿಂದ ಸೋಲಿಸುವ ಮೂಲಕ ತನ್ನ ಮೊದಲ ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿತು.

1975 ಮತ್ತು 1979 ರಲ್ಲಿ ಗ್ರೂಪ್ ಪಂದ್ಯಗಳಿಂದಲೇ ಹೊರಬಿದ್ದು, ಭಾರತೀಯ ಕ್ರಿಕೆಟ್ ತಂಡ ಬರೀ ತಿನ್ನೋದಕ್ಕೆ ಮತ್ತು ಮಜಾ ಮಾಡೋದಕ್ಕೆ ಲಾಯಕ್ಕು ಎನ್ನುವ ಧೋರಣೆಯಲ್ಲಿದ್ದ ವಿಶ್ವಕ್ಕೆ, ಬಲವಾದ ಹೊಡೆತ ನೀಡಿ ಭಾರತೀಯ ಕ್ರಿಕೆಟ್ ತಂಡದ ನೈಜ ಸಾಮರ್ಥ್ಯವನ್ನು ಪ್ರಪಂಚಕ್ಕೆ ಸಾರಿ ಭಾರತದ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯುವಂತೆ ಮಾಡಿದ ದಿನವನ್ನು ಯಾವ ಭಾರತೀಯನೂ ಮರೆಯಲಾರ.

ಭಾರತವನ್ನು ಹೆಡೆಮುರಿ ಕಟ್ಟಿ ಬಿಸಾಕುತ್ತೇವೆ ಎಂದು ಬೀಗುತ್ತಿದ್ದ ಧಾಂಡಿಗರಿಗೆ ಭಾರತೀಯ ತಂಡ ಎಂತಹ ಆಘಾತ ನೀಡಿತ್ತೆಂದರೆ ಇಡೀ ಜಗತ್ತೇ ದಂಗಾಗಿ ಈ ಘಟನೆಯನ್ನು ನೋಡಿತ್ತು. ಗ್ರೂಪ್ ಪಂದ್ಯಗಳಲ್ಲೇ ಹೊರಬೀಳುತ್ತಿದ್ದ ಭಾರತ, 1983 ರಲ್ಲಿ ಎರಡು ಬಾರಿಯ ವಿಶ್ವ ಛಾಂಪಿಯನ್ ವೆಸ್ಟ್ ಇಂಡೀಸ್ ಅನ್ನು ಸೋಲಿಸಿ ವಿಶ್ವ ಕಪ್ ಅನ್ನು ಎತ್ತಿ ಹಿಡಿದು, ಭಾರತಕ್ಕೆ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವುದನ್ನು ಇಡೀ ವಿಶ್ವಕ್ಕೆ ಸಾರಿತ್ತು.

ಭಾರತೀಯರೆಲ್ಲರೂ ಹೆಮ್ಮೆ ಪಡುವ ದಿನವಿದು. ಭಾರತ ಮನಸು ಮಾಡಿದರೆ ವಿಶ್ವಕಪ್ ಏನು ಇಡೀ ವಿಶ್ವವನ್ನೇ ಎತ್ತಬಲ್ಲದು!