ಕುಂದಾಪುರ: ಹೆಚ್ಚುವರಿ ಹೆಸರಿನಲ್ಲಿ ಶಿಕ್ಷಕರ ವರ್ಗಾವಣೆಗೆ ಮುಂದಾದ ಶಿಕ್ಷಣ ಇಲಾಖೆಯ ವಿರುದ್ದ ಬೈಂದೂರಿನ ಉಪ್ಪುಂದ ಸರ್ಕಾರಿ ಪ್ರೌಢ ಶಾಲಾ ೬೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಉಪ್ಪುಂದ ಸರಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು ೬೧೨ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದು, ೧೬ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದರು. ಉಪ್ಪುಂದ ಪ್ರೌಢ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಈ ಬಾರಿಯ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವೂ ಬಂದಿತ್ತು. ಇದೀಗ ಶಿಕ್ಷಣ ಇಲಾಖೆ ಏಕಾಏಕಿಯಾಗಿ ಹೆಚ್ಚುವರಿ ಕಾರಣ ನೀಡಿ ಐದು ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸುವ ನಡೆಗೆ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿ ಪೋಷಕರ ಆಕ್ರೋಶದ ಕಟ್ಟೆಯೊಡೆಯುವಂತೆ ಮಾಡಿದೆ.
ಶಿಕ್ಷಕರ ವರ್ಗಾವಣೆಯ ವಿಚಾರ ಕೇಳಿ ಶುಕ್ರವಾರ ತರಗತಿ ಬಹಿಷ್ಕರಿಸಿ ಶಾಲಾ ಆವರಣದೊಳಗೆ ಪೋಷಕರ ಬೆಂಬಲದೊಂದಿಗೆ ಧರಣಿ ಕೂತ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಯ ಹಾಗೂ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ೧೧ ತರಗತಿಗಳಿದ್ದು, ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಅಚ್ಚುಕಟ್ಟಾಗಿ ೧೧ ತರಗತಿಗಳಿಗೂ ದಣಿವರಿಯದೇ ಪಾಠ ಮಾಡುತ್ತಿದ್ದಾರೆ. ಇಂಗ್ಲೀಷ್ ಹಾಗೂ ಸಮಾಜ ವಿಷಯಕ್ಕೆ ಶಿಕ್ಷಕರ ಕೊರತೆಯಿದ್ದು, ಇದೀಗ ಇದ್ದಕ್ಕಿಂತ ಹೆಚ್ಚುವರಿ ನೆಪ ಹೇಳಿ ಇದ್ದ ಐದೂ ಶಿಕ್ಷಕರಿಗೆ ವರ್ಗಾವಣೆ ಆದೇಶ ನೀಡಿರುವುದು ಖಂಡನೀಯ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದ್ದು, ಇಲಾಖೆ ಕೂಡಲೇ ನಮ್ಮ ಬೇಡಿಕೆಗಳನ್ನು ಆಲಿಸಿ ಶೀಕ್ಷಕರ ವರ್ಗಾವಣೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.
ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ನಮ್ಮ ಮನವಿಯನ್ನು ಸ್ವೀಕರಿಸಬೇಕು ಇಲ್ಲವಾದರೆ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕಾಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲಾಖೆಯ ನಿಯಮದಂತೆ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆಗೊಳಿಸಲು ಆದೇಶ ನೀಡಲಾಗಿದೆ. ವಿದ್ಯಾರ್ಥಿಗಳ ಮನವಿಯನ್ನು ಆಲಿಸಿ ಮತ್ತೆ ಈ ಬಗ್ಗೆ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ತನಕವೂ ವರ್ಗಾವಣೆಗೆ ಆದೇಶ ನೀಡಿದ ಐವರೂ ಶಿಕ್ಷಕರನ್ನು ಬೇರಡೆಗೆ ಕಳುಹಿಸುವುದಿಲ್ಲ ಎಂದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದರು.