ಮೂಡಬಿದಿರೆ: ಮೂಡಬಿದಿರೆಯ ಜವಾಹರಲಾಲ್ ನೆಹರೂ ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ ಪದ್ಮಾಕ್ಷಿ ಎನ್ ಅವರು ಇಂದು ಕೊರೊನಾ ಸೋಂಕಿನಿಂದ ನಿಧನ ಹೊಂದಿದರು.
ಅವರಿಗೆ ‘ವಿದ್ಯಾಗಮ’ ಯೋಜನೆಯಡಿ ಕರ್ತವ್ಯ ನಿರ್ವಹಿಸುವಾಗ ಕೊರೊನಾ ಸೋಂಕು ತಗಲಿತ್ತು. ಸೆಪ್ಟೆಂಬರ್ 29 ರಂದು ಅವರು ಕೋವಿಡ್ ಪಾಸಿಟಿವ್ ವರದಿ ಪಡೆದಿದ್ದರು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
ಪದ್ಮಾಕ್ಷಿಯವರ ಪತಿಗೆ ಸಹ ಕೊರೋನಾ ಸೋಂಕು ತಗುಲಿದೆ. ಅವರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆಯಿಂದ ಅವರೀಗ ಚೇತರಿಸಿಕೊಂಡಿದ್ದಾರೆ. ಪದ್ಮಾಕ್ಷಿ ಅವರ ಪುತ್ರಿ ಐಶ್ವರ್ಯಾ ತಮ್ಮ ಕುಟುಂಬಕ್ಕೆ ನೆರವಾಗುವಂತೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು, ಸಂಸದರು ಮುಂತಾದವರಲ್ಲಿ ನೆರವನ್ನು ಯಾಚಿಸಿದ್ದರು. ಆ ಮನವಿಗೆ ಸ್ಪಂದಿಸಿದ್ದ ಸರ್ಕಾರ ಶಿಕ್ಷಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿತ್ತು. ಆದರೂ ಶಿಕ್ಷಕಿಯ ಜೀವ ಉಳಿಸಲಾಗಲಿಲ್ಲ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮೂಡಬಿದರೆಯ ಶಿಕ್ಷಕಿ ಶ್ರೀಮತಿ ಪದ್ಮಾಕ್ಷಿ ಅವರು ಮೃತ ಪಟ್ಟರೆಂದು ತಿಳಿದು ತುಂಬಾ ವೇದನೆಯೆನಿಸಿದೆ. ಅವರ ಕುಟುಂಬಕ್ಕೆ ಈ ದುಃಖ ಭರಿಸಲು ಶಕ್ತಿ ಸಿಗಲಿ ಎಂದಿದ್ದಾರೆ.