ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಸುಣ್ಣಾರಿಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಇವರು ಪಂದ್ಯವನ್ನುದ್ಘಾಟಿಸಿ ಮಾತನಾಡಿ, ಪಾಠದ ಜೊತೆಗೆ ಆಟವೂ ಕೂಡ ಅಷ್ಟೇ ಮುಖ್ಯವಾಗಿದೆ. ವಿದ್ಯಾರ್ಥಿಗಳು ಲವಲವಿಕೆಯಿಂದ ಭಾಗವಹಿಸಿದಾಗ ಆಟಕ್ಕೆ ಕಳೆಬರುತ್ತದೆ. ಸ್ಪರ್ಧಾಳುಗಳು ಆಟದ ಕೊನೆಯವರೆಗೂ ತಂಡದ ಉತ್ಸಾಹವನ್ನು ಕಳೆದುಕೊಳ್ಳದೆ ಹುರುಪಿನೊಂದಿಗೆ ಪ್ರೇಕ್ಷಕರನ್ನು ರೋಮಾಂಚನಗೊಳಿಸುವಂತೆ ಆಟವಾಡಬೇಕೆಂದು ಹೇಳುತ್ತಾ, ಸಂಸ್ಥೆಯ ಅಚ್ಚುಕಟ್ಟಾದ ಕ್ರೀಡಾ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಎಂ. ಮಹೇಶ್ ಹೆಗ್ಡೆ ಮಾತನಾಡುತ್ತಾ, ಶಿಕ್ಷಣ ಇಲಾಖೆಯು ನಮ್ಮ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ವಾಲಿಬಾಲ್ ಆಯೋಜಿಸಿದಕ್ಕೆ ಹೆಮ್ಮೆ ಎನಿಸುತ್ತದೆ. ಇಲ್ಲಿ ಆಟದಲ್ಲಿ ಯಾರೇ ಗೆಲ್ಲಲಿ ಯಾರೇ ಸೋಲಲಿ ನಮಗೆ ಭಾಗವಹಿಸಿದ ತೃಪ್ತಿ ಇರುತ್ತದೆ. ಸ್ಪರ್ಧಾತ್ಮಕ ದೃಷ್ಟಿಯಿಂದ ಆಡುವುದು ಸೂಕ್ತ, ಇದು ಜೀವನದಲ್ಲಿ ನಾವು ಬೆಳೆಯಲು ಸಹಕಾರಿಯಾಗುತ್ತದೆ. ಇಲ್ಲಿ ಆಡಿದ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಿಂದ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಡುವಂತಾಗಲಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಸ್ಪರ್ಧಾಳುಗಳನ್ನು ಉದ್ದೇಶಿಸಿ ಸ್ಪರ್ಧಾ ಮನೋಭಾವದಿಂದ ಆಟವನ್ನು ಆಡಿ ಸ್ಪರ್ಧೆಯ ನಿಯಮವನ್ನು ಅಚ್ಚುಕಟ್ಟಾಗಿ ಪಾಲಿಸಿ ಶಿಸ್ತು ಬದ್ಧರಾಗಿರಿ ಎನ್ನುತ್ತಾ ಆಟಗಾರರಿಗೆ ಶುಭಹಾರೈಸಿದರು.

ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ನ ಖಜಾಂಚಿ ಭರತ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ದೈಹಿಕ ನಿರ್ದೇಶಕ ಜೀವನ್ ಕುಮಾರ್ ಶೆಟ್ಟಿ, ಕ್ರೀಡಾ ಸಂಯೋಜಕ ರಾಮ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಪರ್ಧೆಯ ಫಲಿತಾಂಶ: ಕುಂದಾಪುರ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಶ್ರೀ ಶಾರದ ಕಾಲೇಜು ಬಸ್ರೂರು ಪ್ರಥಮ ಸ್ಥಾನ ಹಾಗೂ ವೆಂಕಟರಮಣ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಸರ್ಕಾರಿ ಪ.ಪೂ ಕಾಲೇಜು ಕೋಟೇಶ್ವರ ಪ್ರಥಮ ಸ್ಥಾನ ಮತ್ತು ಭಂಡಾರ್‌ರ‍್ಸ್ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಪಂದ್ಯಾಟದಲ್ಲಿ ಒಟ್ಟು ೨೫ ತಂಡಗಳು ಭಾಗವಹಿಸಿದ್ದು ಎಕ್ಸಲೆಂಟ್ ಸಂಸ್ಥೆಯ ಅನುಜ್ ಕುಮಾರ್ ಜೆ ಎಸ್ ಜಿಲ್ಲಾ ಮಟ್ಟದ ತಂಡಕ್ಕೆ ಆಯ್ಕೆಯಾಗಿರುತ್ತಾರೆ.

ಉದ್ಘಾಟನಾ ಕಾರ್ಯಕ್ರಮವನ್ನು ಆಂಗ್ಲಭಾಷಾ ಉಪನ್ಯಾಸಕ ಪ್ರಕಾಶ್ ಆಚಾರ್ಯ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಶರತ್ ಕುಮಾರ್ ನಿರ್ವಹಿಸಿದರು. ವಿಶೇಷವಾಗಿ ಅಭಿ ಪಾಂಡೇಶ್ವರ್ ಇವರ ವೀಕ್ಷಕ ವಿವರಣೆ ಪಂದ್ಯಕ್ಕೆ ಮೆರುಗು ನೀಡಿತ್ತು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಜಯಲತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕುಮಾರ್‌ ವಂದಿಸಿದರು.