ಆಶಾದೀಪ ಯೋಜನೆಯ ಪ್ರಯೋಜನ ಪಡೆಯಿರಿ: ಜಿಲ್ಲಾಧಿಕಾರಿ

ಉಡುಪಿ: ಕರ್ನಾಟಕ ಖಾಸಗಿ ವಲಯದ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡಲು, ಉದ್ದಿಮೆಗಳ ಮಾಲೀಕರನ್ನು ಪ್ರೋತ್ಸಾಹಿಸುವ ಸಲುವಾಗಿ ಜಾರಿಗೆ ತಂದಿರುವ ಆಶಾ ದೀಪ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಎಲ್ಲಾ ಉದ್ದಿಮೆದಾರರು ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಆಶಾದೀಪ ಯೋಜನೆ ಅನುಷ್ಠಾನದ ಪ್ರಗತಿ ಮತ್ತು ಯೋಜನೆಯ ಅರ್ಜಿಗಳ ಪ್ರಾಥಮಿಕ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಶಾದೀಪ ಯೋಜನೆಯ ಕುರಿತಂತೆ ಜಿಲ್ಲೆಯ ಎಲ್ಲಾ ಉದ್ದಿಮೆದಾರರಿಗೆ ಅಗತ್ಯ ಮಾಹಿತಿಯನ್ನು ನೀಡಿ, ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಂತೆ ಕಾರ್ಮಿಕ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಆಶಾದೀಪ ಯೋಜನೆಯಡಿ ಖಾಸಗಿ ವಲಯದ ಸಂಸ್ಥೆಗಳಲ್ಲಿ, ಪ.ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ, ಅಪ್ರೆಂಟಿಸ್ ತರಬೇತಿ ನೀಡಿದ್ದಲ್ಲಿ ಅಂತಹ ಸಂಸ್ಥೆಗಳ ಉದ್ಯೋಗದಾತರು/ ಮಾಲೀಕರಿಗೆ ನಿಗದಿತ ಅವಧಿಯವರೆಗೆ ಅವರು, ಪ,ಜಾತಿ ವರ್ಗದ ಸಿಬ್ಬಂದಿಗಳಿಗೆ ನೀಡುವ ವೇತನದ ನಿಗಧಿತ ಮೊತ್ತವನ್ನು ಸರ್ಕಾರದಿಂದ ಮರು ಪಾವತಿ ಮಾಡಲಾಗುವುದು.

ಆಶಾದೀಪ ಯೋಜನೆಯ ಪ್ರಯೋಜನವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ ಏಕೋ ಕೆಮ್ ಲ್ಯಾಬೋರೇಟರೀಸ್ ಸಂಸ್ಥೆಯ ಮಾಲೀಕರಿಗೆ ರೂ 103035.00 ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ವಿತರಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರೇಮ್ ಸಾಗರ್, ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.