ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಟೈಲರ್ಸ್: ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ

ಉಡುಪಿ: ಕೋವಿಡ್ 19 ಲಾಕ್ ಡೌನ್ ನಿಂದಾಗಿ ಹೊಲಿಗೆ ವೃತ್ತಿ (ಟೈಲರ್) ಬಾಂಧವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಸರ್ಕಾರ ಟೈಲರಿಂಗ್ ವೃತ್ತಿಯಲ್ಲಿ ತೊಡಗಿಕೊಂಡಿರುವವರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ನ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಒತ್ತಾಯಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೈಲರ್ಸ್ ಬಾಂಧವರು ಈ ಮೊದಲೇ ಸಿದ್ಧ ಉಡುಪಿನ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿದ ಲಾಕ್ ಡೌನ್ ನಮ್ಮ ಬದುಕಿಗೆ ಮತ್ತಷ್ಟು ಪೆಟ್ಟು ನೀಡಿದೆ ಎಂದು ಅಳಲು ತೋಡಿಕೊಂಡರು.
ಲಾಕ್ ಡೌನ್ ನಿಂದಾಗಿ ಯಾವುದೇ ಶುಭ ಸಮಾರಂಭ, ಜಾತ್ರೆ, ಹಬ್ಬಹರಿದಿನ ನಡೆಯುತ್ತಿಲ್ಲ. ಜನಸಾಮಾನ್ಯರು ಬಟ್ಟೆಗಳನ್ನು ಹೊಲಿಯಲು ಮುಂದಾಗುತ್ತಿಲ್ಲ. ಇದರಿಂದ ಟೈಲರ್ ಗಳಿಗೆ ಸಂಪಾದನೆ ಇಲ್ಲದೆ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ದುಡಿಮೆ ಇಲ್ಲದೆ ಸಾಕಷ್ಟು ಮಂದಿಯ ಬದುಕು ಬೀದಿಗೆ ಬಿದ್ದಿದೆ ಎಂದು ಹೇಳಿದರು.
ದುಡಿಮೆ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಕನ್ನರ್ಪಾಡಿಯ ರಘುನಾಥ ಸೇರಿಗಾರ್ ಎಂಬ ಟೈಲರ್ ಒಬ್ಬರು ಆತ್ಯಹತ್ಯೆ ಮಾಡಿಕೊಂಡಿದ್ದು, ಇದು ಇಡೀ ಟೈಲರ್ ಬಾಂಧವರಿಗೆ ನೋವಿನ  ಸಂಗತಿಯಾಗಿದೆ. ಸರ್ಕಾರ ಕೂಡಲೇ ಎಚ್ಚೆತ್ತು ಮೃತ ರಘುನಾಥ ಕುಟುಂಬಕ್ಕೆ ಮುಖ್ಯಮಂತ್ರಿಗಳ ವಿಪತ್ತು ನಿಧಿಯಿಂದ 5 ಲಕ್ಷ ರೂ. ಪರಿಹಾರ ನೀಡಬೇಕು ಹಾಗೂ ಎಲ್ಲ ಟೈಲರ್ ಗಳ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಘುನಾಥ ಅವರ ಹಾದಿಯನ್ನೇ ಎಲ್ಲರೂ ಹಿಡಿಯಬೇಕಾದ ಪರಿಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ರಾಮಚಂದ್ರ, ರಾಜ್ಯ ಸಮಿತಿ ಮುಖಂಡ ಅಬ್ದುಲ್ ಖಾದರ್, ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷೆ ಮೀನಾಕ್ಷಿ ರಾಜೀವನಗರ ಇದ್ದರು.