ಉಡುಪಿ: ಪ.ಜಾತಿ,ಪಂಗಡ ಪ್ರಮಾಣ ಪತ್ರ 28 ವಿಧದ ಪರಿಶೀಲನೆ: ಠಾಗೋರ್

ಉಡುಪಿ : ಪ.ಜಾತಿ ಮತ್ತು ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಾಗ 28 ವಿಧದ ಪರಿಶೀಲನೆ ನಡೆಸಿ, ಪ್ರಮಾಣ ಪತ್ರ ವಿತರಿಸಬೇಕಾಗಿದ್ದು, ಈ ಕುರಿತಂತೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಸಮಗ್ರ ಮಾಹಿತಿ ನೀಡಿದ್ದು, ಅದರಂತೆ ಕಾರ್ಯ ನಿರ್ವಹಿಸಬೇಕು ಎಂದು ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ನಿವೃತ್ತ ಎಡಿಜಿಪಿ ರವೀಂದ್ರನಾಥ ಠಾಗೂರ್ ತಿಳಿಸಿದ್ದಾರೆ.

ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ(ಐಟಿಡಿಪಿ) ಉಡುಪಿ ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ನೀಡುವಾಗ ಮತ್ತು ಪಡೆಯುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳ ಕುರಿತು ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದರು.

 ಪ.ಜಾತಿ ಪಂಗಡ ಪ್ರಮಾಣ ಪತ್ರ ನೀಡಲು ಅರ್ಜಿದಾರನ ಪೋಷಕರ ವಿಚಾರಣೆ, ಆತನ ಮನೆಯಲ್ಲಿನ ದೇವರು, ಮನೆಯ ಆಚರಣೆ, ಮಗು ಜನಿಸಿದಾಗ, ಮದುವೆ ಸಂದರ್ಭದಲ್ಲಿ, ಮರಣ ಹೊಂದಿದಾಗ ಆಚರಿಸುವ ಆಚರಣೆಗಳು, ನೆರೆಹೊರೆಯವರ ವಿಚಾರಣೆ ಸೇರಿದಂತೆ ವಿವಿಧ ರೀತಿಯ 28 ವಿಧದಲ್ಲಿ ಪರಿಶೀಲನೆ ನಡೆಸಬೇಕಾಗಿದ್ದು, ಪ್ರಮಾಣಪತ್ರ ನೀಡುವ  ಅಧಿಕಾರವನ್ನು ತಹಸೀಲ್ದಾರ್ ಗಳಿಗೆ ನೀಡಲಾಗಿದೆ, ಅರ್ಜಿದಾರರನು  ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ 1 ತಿಂಗಳ ಅವಧಿಯೊಳಗೆ ವಿತರಿಸಬೇಕು ಎಂಬ ನಿಯಮವಿದೆ ಅದರೆ ಅನಿವಾರ್ಯ ಸಂದರ್ಭದಲ್ಲಿ 2 ತಿಂಗಳವರೆಗೆ ವಿಸ್ತರಿಸಬಹುದಾಗಿದೆ, ತಹಶೀಲ್ದಾರ್‍ಗಳು ಕಡ್ಡಾಯವಾಗಿ ಸ್ಥಳ ಮಹಜರು ಮಾಡಿ ಪ್ರಮಾಣ ಪತ್ರ ವಿತರಿಸಬೇಕು, ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದಲ್ಲಿ ಸಂಬಂದಪಟ್ಟ ತಹಶೀಲ್ದಾರ್ ಮೇಲೆ ಸಹ ಕ್ರಿಮಿನಲ್ ಕೇಸ್ ದಾಖಲಿಸಲು ಹಾಗೂ 5000 ರಿಂದ 20000 ದ ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದರು.

  ಸಂಪನ್ಮೂಲ ವ್ಯಕ್ತಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಬೆಳಗಾವಿಯ ನಿವೃತ್ತ ಎಸ್ಪಿ ಅಶೋಕ್ ಕುರೇರಾ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ. ಕೆ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಕುಂದಾಪುರ ಉಪ ವಿಭಾಗಾಧಿಕಾರಿ ಮಧುಕೇಶ್ವರ್, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು. ಐಟಿಡಿಪಿ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಲಲಿತಾ ಬಾಯಿ ಸ್ವಾಗತಿಸಿದರು, ವಿಶ್ವನಾಥ್ ನಿರೂಪಿಸಿದರು. ಜಿಲ್ಲೆಯ ಪ.ಪಂಗಡದ ಸಮುದಾಯದ ಮುಖ್ಯಸ್ಥರು, ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.