ಶ್ರೀಕೃಷ್ಣಮಠದಲ್ಲಿ ಗ್ರಹಣ ಕಾಲದ ಜಪ ತಪ ಅನುಷ್ಠಾನ
ಉಡುಪಿ: ಸೂರ್ಯಗ್ರಹಣ ಆರಂಭ ಕಾಲದಲ್ಲಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಧ್ವಸರೋವರದಲ್ಲಿ ಸ್ನಾನ ಮಾಡಿ ದಂಡೋದಕ ಅರ್ಘ್ಯ ನೀಡಿ ಗ್ರಹಣ ಕಾಲದಲ್ಲಿ ಜಪಾನುಷ್ಠಾನಗಳನ್ನು ನಡೆಸಿದರು. ಭಕ್ತಾದಿಗಳು ಗ್ರಹಣ ಕಾಲದಲ್ಲಿ ಸ್ನಾನಮಾಡಿ ಅನುಷ್ಠಾನಗಳನ್ನು ನಡೆಸಿದರು.
ಕಾಡುಬೆಟ್ಟಿನಲ್ಲಿ ಸಾಮೂಹಿಕ ಸೂರ್ಯಗ್ರಹಣ ಶಾಂತಿ ಹೋಮ
ಉಡುಪಿ: ಅಬ್ಬಗ ದಾರಗ ವೀರಭದ್ರ ಮತ್ತು ಶನೇಶ್ವರ ದೇವಸ್ಥಾನ ಟ್ರಸ್ಟ್ ವತಿಯಿಂದ ಮಂಗಳವಾರ ಶ್ರೀ ಶನೈಶ್ವರ ದೇವರ ಸನ್ನಿಧಿಯಲ್ಲಿ ಸಂಜೆ ಸಾಮೂಹಿಕ ಸೂರ್ಯಗ್ರಹಣ ಶಾಂತಿ ಹೋಮ ನಡೆಯಿತು. ಅರ್ಚಕರು ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ನವಗ್ರಹ ಮಂಡಲ ಪೂಜೆ, ಪೂರ್ಣಾಹುತಿ, ಮಹಾಪೂಜೆ ನಡೆಸಿಕೊಟ್ಟರು. ದೇವಳದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ನೂರಾರು ಭಕ್ತರು ಉಪಸ್ಥಿತರಿದ್ದರು.