ಜೀರ್ಣೋದ್ಧಾರಕ್ಕೆ ಅಣಿಯಾದ 800 ವರ್ಷಗಳಷ್ಟು ಪುರಾತನದ ಎಡ ಕೈಯಲ್ಲಿ ಆಶೀರ್ವಾದ ನೀಡುವ ಬೈಂದೂರಿನ ಯತ್ತಾಬೇರು ದುರ್ಗಾಪರಮೇಶ್ವರಿ ಅಮ್ಮನವರ ದೇಗುಲ.

ಪ್ರಾಚೀನ ದೇಗುಲವನ್ನು ಜೀರ್ಣೋದ್ಧಾರ ಮಾಡುವುದು ಅತ್ಯಂತ ಪುಣ್ಯದ ಮತ್ತು ಅತೀ ಶ್ರೇಷ್ಠ ಕೆಲಸ ಎಂದು ಶಾಸ್ತ್ರಗಳಲ್ಲಿ  ಮತ್ತು ಬಲ್ಲವರು ಹೇಳುತ್ತಾರೆ. ಆ ನಿಟ್ಟಿನಲ್ಲಿ 800 ವರ್ಷಗಳಿಗೂ ಅಧಿಕ ಇತಿಹಾಸವನ್ನು ಹೊಂದಿರುವ ಬೈಂದೂರಿನ ತಗ್ಗರ್ಸೆ ಗ್ರಾಮದ ಯತ್ತಾಬೇರುನಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಜೈನರ ಕಾಲದಲ್ಲಿ ಪ್ರತಿಷ್ಟಾಪನೆಗೊಂಡಿತ್ತು. ಇದಕ್ಕೆ ಸಾಕ್ಷಿಯಾಗಿ ಈ ಅಮ್ಮನವರನ್ನು ಬಹಳ ಹಿಂದೆ ಜೈನರ ಆರಾಧ್ಯ ದೇವಿಯಾದ ಪದ್ಮಾವತಿ ಅಮ್ಮನವರು ಎಂದು ಕರೆಯುತ್ತಿದ್ದರಂತೆ ಮತ್ತು ಇಲ್ಲಿ ಪರಿವಾರ ದೈವಗಳಾಗಿ ಜೈನ ಜಟ್ಟಿಗೇಶ್ವರ ಮತ್ತು ಜೈನ ಯಕ್ಷಿ ಗುಡಿಯು ಸ್ಥಾಪಿತಗೊಂಡಿತ್ತು.

ಈ ದೇವಸ್ಥಾನ ಆಸುಪಾಸಿನ ಪರಿಸರದಲ್ಲಿ ವಾಸವಿದ್ದ ಬುಡಕಟ್ಟು ಜನಾಂಗದವರು ಈ ಅಮ್ಮನವರನ್ನು “ವನದುರ್ಗೆ” ಎಂದು ಕರೆಯುತ್ತಿದ್ದರಂತೆ. ಅಲ್ಲದೇ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಮಧ್ಯೆ ಇರುವ ಈ ಪುಣ್ಯ ಸಾನಿಧ್ಯವು ಪರಮ ಪಾವನ ಶಕ್ತಿ ಸನ್ನಿಧಾನಗಳಲ್ಲಿ ಒಂದಾಗಿದ್ದು ಈ ದೇವಸ್ಥಾನವು ಯಡ್ತರೆ ಶೆಟ್ಟರ ಕುಟುಂಬದ ಕುಲದೇವಿಯೂ ಹೌದು.

ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಹಲವಾರು ದುರ್ಗಾಪರಮೇಶ್ವರಿ ದೇವಸ್ಥಾನಗಳಿದ್ದು, ಎಲ್ಲಾ ದುರ್ಗಾಪರಮೇಶ್ವರಿ ಅಮ್ಮನವರ ವಿಗ್ರಹಗಳು ಕುಳಿತಿರುವ ಭಂಗಿಯಲ್ಲಿದ್ದು ಬಲ ಹಸ್ತದಿಂದ ಆಶೀರ್ವಾದ ನೀಡುತ್ತಿರುತ್ತಾಳೆ. ಆದರೆ ಈ ಬೈಂದೂರಿನ ಯತ್ತಾಬೇರು ದುರ್ಗಾಪರಮೇಶ್ವರಿ ಅಮ್ಮನವರು ಹೇಗೆ ವಿಭಿನ್ನ, ವಿಶಿಷ್ಟ ಮತ್ತು ಅಪರೂಪವೆಂದರೆ ಈ ಅಮ್ಮನವರ ವಿಗ್ರಹವು ನಿಂತಿರುವ ಭಂಗಿಯಲ್ಲಿದ್ದು,  ಎಡ ಹಸ್ತದಿಂದ ಆಶೀರ್ವಾದ ನೀಡುತ್ತಿದ್ದಾಳೆ. ಭಕ್ತರ ಬಾಳಿನಲ್ಲಿ ಸದಾ ಪವಾಡಗಳು ಚಮತ್ಕಾರಗಳನ್ನು ಸೃಷ್ಟಿಸುತ್ತಾ ಬಂದಿರುವ ಈ ದುರ್ಗಾಪರಮೇಶ್ವರಿ ಮಾತೆಯ ಮಹತ್ವದ ಸಂಗತಿಯೆಂದರೆ ಇಂತಹದ್ದೇ ಮಾದರಿಯ ಎಡಗೈ ಆಶೀರ್ವಾದ ಭಂಗಿಯ ಅಮ್ಮನವರ ವಿಗ್ರಹವು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಶಾಲಿ ಭಗವತಿ ಅಮ್ಮನವರ ದೇವಾಲಯಗಳಾದ ಕನ್ಯಾಕುಮಾರಿ ಮತ್ತು ಕೇರಳದ ಚೊಟ್ಟಾನಿಕೆರೆಯಲ್ಲಿ ಮಾತ್ರ ಕಾಣಸಿಗುತ್ತದೆ. ಹಾಗಾಗಿ ಬೈಂದೂರಿನ ಯತ್ತಾಬೇರು ದುರ್ಗಾಪರಮೇಶ್ವರೀ ದೇವಸ್ಥಾನವು ಅಖಂಡ ಭಾರತದಲ್ಲಿಯೇ ಬಹಳ ಪುರಾತನವಾದದ್ದು ಮತ್ತು ಇಲ್ಲಿನ ಅಮ್ಮನವರ ವಿಗ್ರಹದ ಮಾದರಿಗೆ ವಿಸ್ತಾರವಾದ ಭೂಖಂಡದಲ್ಲಿಯೇ 3 ನೇ ಸ್ಥಾನ ಸಲ್ಲಬೇಕು ಎಂದರೆ ಬಹುಶಃ ತಪ್ಪಾಗಲಾರದು‌.

ಪಶ್ಚಿಮ ಘಟ್ಟಗಳ ದಟ್ಟವಾದ ಕಾಡಿನ ನಡುವಡ ನೆಲೆನಿಂತು ಭಕ್ತರ ಪ್ರಾರ್ಥನೆಯನ್ನು ಮನ್ನಿಸುವ ಈ ಪವಿತ್ರ ತಾಣವು ಪ್ರಬಲ ಶಕ್ತಿ ಸಾನ್ನಿಧ್ಯವಾಗಿದ್ದು 800 ವರ್ಷಗಳಿಗೂ ಮೀರಿದ ಇತಿಹಾಸ ಹೊಂದಿದೆ. ಜಗದ ಜನನಿಯ ಕಾರುಣ್ಯದ ಈ ನೆಲದ ದೇವಾಲಯಕ್ಕೆ ಈಗ ಜೀರ್ಣೋದ್ಧಾರದ ಸಡಗರ‌.ಪ್ರಾಚೀನ ದೇಗುಲವನ್ನು ಜೀರ್ಣೋದ್ಧಾರ ಮಾಡುವ ಮೂಲಕ ದಿವ್ಯ ಸಾನಿಧ್ಯದ ಪವಿತ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಒಂದು ಪುಣ್ಯದ ಕೆಲಸ ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮದ ಪೂರ್ವಭಾವಿ ಸಭೆ 12-4-2020 ಭಾನುವಾರದಂದು ಬೆಳಿಗ್ಗೆ ದುರ್ಗಾ ಹೋಮದೊಂದಿಗೆ ಆರಂಭಗೊಂಡು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ತಾಯಿಯ ಸನ್ನಿಧಾನದ ಜೀರ್ಣೋದ್ಧಾರದ ಕೆಲಸದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಭವ್ಯ ಭಾರತದ ಸನಾತನ ಪರಂಪರೆಯನ್ನು ಮುಂದುವರಿಸುವ ಮಹೋನ್ನತ ಕಾರ್ಯದಲ್ಲಿ ಕೈ ಜೋಡಿಸೋಣ. ಈ ಹಿನ್ನೆಲೆಯಲ್ಲಿ ಊರ ಪರವೂರ ಸಮಸ್ತ ಭಕ್ತಾದಿಗಳು ಮತ್ತು ಯಡ್ತರೆ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ‌ದೇವಸ್ಥಾನವು ಪ್ರಕಟಣೆ ತಿಳಿಸಿದೆ.