ಮಂಗಳೂರಿನಲ್ಲಿ ರೌಡಿಶೀಟರ್ ವಿಕ್ಕಿ ಬಪ್ಪಲ್ ಮೇಲೆ ತಲ್ವಾರ್ ದಾಳಿ

ಮಂಗಳೂರು: ನಗರದ ಲಾಲ್‌ಬಾಗ್‌ ಸಮೀಪ ಶನಿವಾರ ಮಧ್ಯಾಹ್ನ ರೌಡಿಶೀಟರ್ ವಿಕ್ಕಿ ಬಪ್ಪಲ್ ಎಂಬಾತನ ಮೇಲೆ ಅಪರಿಚಿತ ದುಷ್ಕರ್ಮಿಯೊಬ್ಬ ತಲ್ವಾರ್‌ನಿಂದ ದಾಳಿ ನಡೆಸಿ ಪರಾರಿಯಾಗಿದ್ದಾನೆ.

ಮಧ್ಯಾಹ್ನ ಸುಮಾರು 1.45ರ ವೇಳೆಗೆ ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿ ಏಕಾಏಕಿ ವಿಕ್ಕಿ ಬಪ್ಪಲ್ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ದಾಳಿಯಲ್ಲಿ ಕುತ್ತಿಗೆ ಹಾಗೂ ಬೆನ್ನಿನ ಹಿಂಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುವನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜನನಿಬಿಡ ಪ್ರದೇಶದಲ್ಲೇ ನಡೆದ ಈ ದಾಳಿಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ದಾಳಿ ನಡೆಸಿದ ಆರೋಪಿ ಘಟನೆಯ ಬಳಿಕ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ವಿಕ್ಕಿ ಬಪ್ಪಲ್ ಡ್ರಗ್ಸ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ರೌಡಿಶೀಟರ್ ಎಂದು ಗುರುತಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಘಟನೆ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.