ಸ್ವೀಪ್- ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ , ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಸಿದ್ದಪಡಿಸಿರುವ ಯಕ್ಷಗಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಚಂಡೆ ಬಾರಿಸುವ ಮೂಲಕ ಭಾನುವಾರ ಮಲ್ಪೆ ಬೀಚ್ ನಲ್ಲಿ ಚಾಲನೆ ನೀಡಿದರು.

ಸಮೃಧ್ದಿಪುರದ ಮಹಾರಾಜನ ಕಥಾಹಿನ್ನಲೆ ಹೊಂದಿರುವ ಈ ಯಕ್ಷಗಾನದಲ್ಲಿ, ಪುತ್ರ ಸಂತಾನವಿಲ್ಲದ ಮಹಾರಾಜ ಸಹ , ತನ್ನ ಉತ್ತರಾಧಿಕಾರಿಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ , ಆರ್ಹ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆ ಮಾಡುವ ಕಥೆ ಇದ್ದು, ಯಾವುದೇ ಆಮಿಷಗಳಿಗೆ ಒಳಗಾಗದೇ ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎನ್ನುವ ಮತದಾನದ ಸಂದೇಶ ಈ ಯಕ್ಷಗಾನದಲ್ಲಿದೆ.

ಕೋಟದ ಕಲಾಪೀಠ ತಂಡದ ಕಲಾವಿದರು ಈ ಯಕ್ಷಗಾನ ಪ್ರದರ್ಶಿಸುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಅತೀ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಮತದಾನ ಹೆಚ್ಚಳಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕರಿ ಸಿಂಧೂ ಬಿ ರೂಪೇಶ್, ಪೌರಾಯುಕ್ತ ಆನಂದ್ ಕಲ್ಲೋಳಿಕರ್, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ರಾಜು, ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಭುಜಬಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ಡಿಹೆಚ್‍ಓ, ಡಾ. ಓಂ ಪ್ರಕಾಶ್ ಕಟ್ಟೀಮನಿ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಉಪಸ್ಥಿತರಿದ್ದರು.

ತಾಲ್ಲೂಕು ಪಂಚಾಯತ್ ನ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ ಸ್ವಾಗತಿಸಿ, ನಿರೂಪಿಸಿದರು.