ಸ್ವಾಮಿ ವಿವೇಕಾನಂದರ ಆದರ್ಶ, ಚಿಂತನೆ ಇಂದಿಗೂ ಪ್ರಸ್ತುತ: ವಿನಯ್ ಬಿದ್ರೆ

ಕಾರ್ಕಳ: ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವ ಸಮುದಾಯಕ್ಕೆ ಸ್ಫೂರ್ತಿದಾಯಕವಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ವಿನಯ್ ಬಿದ್ರೆ ಹೇಳಿದರು.

ಬಿಜೆಪಿ ಯುವಮೋರ್ಚಾ ಕಾರ್ಕಳ ಇದರ ಆಶ್ರಯದಲ್ಲಿ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜಗತ್ತಿಗೆ ಭಾರತದ ಶಕ್ತಿಯನ್ನು ತೋರಿಸಿ ಸನಾತನ ಧರ್ಮದ ಶ್ರೇಷ್ಠತೆಯನ್ನು ಇಡೀ ವಿಶ್ವಕ್ಕೆ ತಿಳಿಸಿಕೊಟ್ಟ ಮಹಾನ್ ನಾಯಕ ಸ್ವಾಮಿ ವಿವೇಕಾನಂದರು. ಅವರ ಚಿಂತನೆ, ಮೌಲ್ಯಗಳನ್ನು ಇಂದಿನ ಯುವಕರು ರೂಢಿಸಿಕೊಳ್ಳುವುದು ಅವಶ್ಯಕ. ಇದರಿಂದ ಭಾರತದ ಭವಿಷ್ಯ ಉಜ್ವಲವಾಗಲಿದೆ ಎಂದರು.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳು ಮತ್ತು ಅವುಗಳನ್ನು ಮೆಟ್ಟಿನಿಂತು ಇಡೀ ಜಗತ್ತು ಮೆಚ್ಚುವ ರೀತಿಯಲ್ಲಿ ಸಾಧನೆ ಮಾಡಿದ್ದಾರೆ. ಅದನ್ನು ಕಾರ್ಯಕರ್ತರು ಅರಿತುಕೊಂಡು, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಕಳ ಯುವ ಮೋರ್ಚಾ ಅಧ್ಯಕ್ಷ ಮುಟ್ಲುಪಾಡಿ ಸುಹಾಸ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ, ಕಾರ್ಕಳ ಮಂಡಲ ಅಧ್ಯಕ್ಷ ಮಹಾವೀರ ಹೆಗಡೆ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶರತ್ ಉಪ್ಪುಂದ, ಕಾರ್ಕಳ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಯೋಗೀಶ್ ಸಾಲಿಯಾನ್ ಮತ್ತು ಭರತ್ ಕುಮಾರ್ ಜೈನ್, ಜಿಲ್ಲಾ ಪದಾಧಿಕಾರಿಗಳಾದ ಸುಮಿತ್ ಮಡಿವಾಳ ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.

ರಾಕೇಶ್ ಶೆಟ್ಟಿ ಪ್ರಾರ್ಥಿಸಿದರು. ಕೌಶಿಕ್ ಅಮೀನ್ ಮುನಿಯಾಲು ಕಾರ್ಯಕ್ರಮ ನಿರೂಪಿಸಿದರು.