ಸ್ವಬಂಧನದಿಂದ ಬಿಡುಗಡೆಯಾಗದಿದ್ದರೆ ಹೆಣ್ಣು ಮಹಾ ಇಳೆಯಾಗಲು ಸಾಧ್ಯವಿಲ್ಲ: ಆಶಾದೇವಿ 

ಉಡುಪಿ: ಮಹಿಳೆಯರು ಎಲ್ಲಿಯವರೆಗೆ ತಮಗೆ ತಾವೇ ಹಾಕಿಕೊಂಡಿರುವ ಕೆಲವೊಂದು ಸ್ವಬಂಧನದಿಂದ ಬಿಡುಗಡೆ ಹೊಂದುದಿಲ್ಲವೋ ಅಲ್ಲಿಯವರೆಗೆ ಅವರು ಮಹಾ ಇಳೆಯಾಗಲು ಸಾಧ್ಯವಿಲ್ಲ ಎಂದು ವಿಮರ್ಶಕಿ, ಸ್ತ್ರೀವಾದಿ ಚಿಂತಕಿ ಡಾ. ಎಂ.ಎಸ್‌. ಆಶಾದೇವಿ ಹೇಳಿದರು.
ಉಡುಪಿ ಎಂಜಿಎಂ ಕಾಲೇಜಿನ ಎನ್‌ಎಸ್‌ಎಸ್‌ ಘಟಕ 1 ಮತ್ತು 2ರ ವತಿಯಿಂದ ವಿಶ್ವಮಹಿಳಾ ದಿನಾಚರಣೆ ಪ್ರಯುಕ್ತ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಮಹಾ ಇಳೆ—ಮಹಿಳೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ನಮ್ಮ ಘನತೆಯನ್ನು ಕಳೆದುಕೊಳ್ಳದೆ ಬಹಳ ಮೌನವಾಗಿ ಸ್ತ್ರೀವಾದ ಅತ್ಯಂತ ಮಾನವೀಯವಾದ ಪರಿಸರ ಕಟ್ಟಲು ಪ್ರಯತ್ನಿಸುತ್ತಿದೆ. ಅದು ಯಾರನ್ನು ದಿಕ್ಕರಿಸುತ್ತಿಲ್ಲ. ನಮ್ಮನ್ನು ನಾವು ನೋಡುವ ಕ್ರಮ ಬದಲಾಗದಿದ್ದರೆ ಲೋಕ ನಮ್ಮನ್ನು ನೋಡುವ ಕ್ರಮ ಬದಲಾಗಬೇಕೆಂದು ನಮಗೆ ಹೇಳುವ ಹಕ್ಕು ಇಲ್ಲ. ನಾವು ಬದಲಾದಾಗ ಮಾತ್ರ ಲೋಕ ನಮ್ಮನ್ನು ನೋಡುವ ರೀತಿಯನ್ನು ಬದಲಾಯಿಸಬೇಕೆಂದು ಹಕ್ಕೊತ್ತಾಯ ತರಲು ಸಾಧ್ಯವಾಗುತ್ತದೆ ಎಂದರು.
ಒಂದು ಹೆಣ್ಣನ್ನು ದೇಹ ಮಾತ್ರದಿಂದ ಹೊರತುಪಡಿಸಿ ಅವಳನ್ನು ಒಂದು ವ್ಯಕ್ತಿತ್ವ ಎಂದು ಎಲ್ಲಿಯವರೆಗೆ ನೋಡುವುದಿಲ್ಲವೋ ಅಲ್ಲಿಯವರೆಗೆ ಯಾವುದೇ ಬದಲಾವಣೆ ನೋಡಲು ಸಾಧ್ಯವಿಲ್ಲ. ನಾವು ಸಮಾನತೆಯನ್ನು ಕೇಳುತ್ತಿಲ್ಲ. ನಾವು ಕೇಳುತ್ತಿರುವುದು ಸ್ವಯತ್ತತೆಯನ್ನು. ಸ್ವಯತ್ತತೆ ಎನ್ನುವುದು ಗಂಡಿಗೂ ಇದೆ, ಹೆಣ್ಣಿಗೂ ಇದೆ. ಗಂಡನೂ ಮನೆಗೆ ಒಡೆಯನಲ್ಲದ, ಹೆಂಡತಿಯೂ ಮನೆಗೆ ಒಡತಿಯಲ್ಲದ ಒಂದು ವಿಕೇಂದ್ರಿಕೃತ ವ್ಯವಸ್ಥೆಯನ್ನು ನಾವು ಕೇಳುತ್ತಿದ್ದೇವೆ. ಸ್ತ್ರೀವಾದ ಎನ್ನುವುದು ಯಾವ ಕಾರಣಕ್ಕೂ ಯುದ್ಧ ಅಲ್ಲ. ಸ್ತ್ರೀವಾದ ಎಂದರೆ ಇಲ್ಲಿಯತನಕ ಪುರುಷ ನಾಗರಿಕತೆ ಕಂಡಿರುವ ಸೈದ್ಧಾಂತಿಕವಾದ ಸಂರಚನೆ ಎಂದು ಹೇಳಿದರು.
ಮಹಾ ಇಳೆಯಾಗುವುದು ಅಂದರೆ ನನ್ನ ಅಸ್ಮಿತೆಯನ್ನು ಕಂಡುಕೊಳ್ಳುವುದು. ನನಗೆ ನನ್ನದೆ ಆದ ವ್ಯಕ್ತಿತ್ವ ಇದೆ ಅನ್ನುವುದನ್ನು ಸ್ಥಾಪಿಸಿಕೊಳ್ಳುವುದು. ಎಲ್ಲಿಯವರೆಗೆ ನನ್ನ ಆತ್ಮಸಾಕ್ಷಿ ನನ್ನ ವ್ಯಕ್ತಿತ್ವ, ನಡವಳಿಕೆಯನ್ನು ಸಮರ್ಥಿಸುತ್ತೋ ಅಲ್ಲಿಯವರೆಗೆ ನನಗೆ ಲೋಕದ ದೃಢೀಕರಣ ಬೇಕಾಗಿಲ್ಲ. ಈ ಶತಮಾನದ ಆರಂಭದಲ್ಲಿ ವಿದ್ಯೆ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆ ಇವು ಮೂರು ಹೆಣ್ಣಿನ ಬಿಡುಗಡೆಯ ಮಹಾದಾರಿಗಳೆಂದು ತಿಳಿದಿದ್ದೆವು. ಆದರೆ ಈ ಮೂರು ಕ್ಷೇತ್ರದಲ್ಲಿ ಮಹಿಳೆಯರು ಸಾಕಷ್ಟು ದೂರ ಕ್ರಮಿಸಿದರೂ ಯಾಕೆ ಇನ್ನು ಹೆಣ್ಣುಮಕ್ಕಳ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಹಾಗಾಗಿ ಬದಲಾಗಬೇಕಿರುವುದು ಪುರುಷರ, ಮಹಿಳೆಯರ ಅಥವಾ ನಮ್ಮ ಮೌಲ್ಯ ವ್ಯವಸ್ಥೆಯೇ ಎಂದು ಪ್ರಶ್ನಿಸಿದರು.
ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಮಾತನಾಡಿ, ಪ್ರಸ್ತುತ ಒಂದೆರಡು ವರ್ಷ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದವರು ಸಂಪಾದಕ ಹುದ್ದೆಗೆ ಏರುತ್ತಾರೆ. ಆದರೆ ನನಗೆ ಮಹಿಳೆ ಎಂಬ ಕಾರಣಕ್ಕಾಗಿ ಸಂಪಾದಕ ಹುದ್ದೆಗೆ ಹೋಗುವ ಅವಕಾಶ ಸಿಗಲಿಲ್ಲ ಎಂದರು.
ನಾನು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬಂದು 19 ವರ್ಷಗಳು ಕಳೆದಿವೆ. ಆದರೆ ನಾನೊಬ್ಬಳು ಹೆಣ್ಣು ಎಂಬ ಕಾರಣಕ್ಕಾಗಿ ಈಗಲೂ ನನ್ನನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಹೆಣ್ಣಿನ ಶೋಷಣೆ ಎಂಬುದು ಎಲ್ಲ ಕ್ಷೇತ್ರದಲ್ಲೂ ಇದೆ. ಅದು ಪತ್ರಿಕೋದ್ಯಮ ಕ್ಷೇತ್ರವನ್ನೂ ಬಿಟ್ಟಿಲ್ಲ. ಆದರೆ ಆಯಾ ಕ್ಷೇತ್ರದಲ್ಲಿ ಅದರ ಸ್ವರೂಪಗಳು ಬೇರೆ ಬೇರೆಯಾಗಿರುತ್ತವೆ ಅಷ್ಟೇ. ಮನೆಯಿಂದ ಹಿಡಿದು ಕಚೇರಿಯವರೆಗೆ ಶೋಷಣೆ ಕ್ಷಣ ಕ್ಷಣಕ್ಕೂ ಆಗುತ್ತಿರುತ್ತವೆ. ಅದನ್ನು ಹೆಣ್ಣುಮಕ್ಕಳು ಮೆಟ್ಟಿ ನಿಲ್ಲಬೇಕಾದ ಅವಶ್ಯಕತೆ ಇದೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ್‌ ಅಧ್ಯಕ್ಷತೆ ವಹಿಸಿದ್ದರು. ರಂಗ ನಿರ್ದೇಶಕ ಉದ್ಯಾವರ ನಾಗೇಶ್‌ ಕುಮಾರ್‌, ಐಕ್ಯೂಎಸಿ ಸಂಚಾಲಕ ಅರುಣ್‌ ಕುಮಾರ್‌ ಉಪಸ್ಥಿತರಿದ್ದರು.