‘ಸುವರ್ಣ ತ್ರಿಭುಜ’ ಮೀನುಗಾರಿಕೆ ಬೋಟ್ ನಾಪತ್ತೆ ಪ್ರಕರಣ: 11 ದಿನ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ

ಉಡುಪಿ: ಮಲ್ಪೆ ಬಂದರಿನಿಂದ ಬೋಟಿನ ಮಾಲೀಕರು ಸೇರಿದಂತೆ ಒಟ್ಟು ಏಳು ಮಂದಿ ಮೀನುಗಾರರೊಂದಿಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ‘ಸುವರ್ಣ ತ್ರಿಭುಜ’ ಮೀನುಗಾರಿಕಾ ಬೋಟ್ ನಾಪತ್ತೆಯಾಗಿ 11 ದಿನಗಳು ಕಳೆದರೂ ಯಾವುದೇ ಸುಳಿವು ದೊರೆತ್ತಿಲ್ಲ ಎಂದು ವಿವಿಧ ಮೂಲಗಳಿಂದ ತಿಳಿದುಬಂದಿದೆ.
 
ಇದೀಗ ಬೋಟ್ ಪತ್ತೆಗಾಗಿ ಮಂಗಳೂರು, ಗೋವಾ ಹಾಗೂ ಮಹಾರಾಷ್ಟ್ರದ ಕೋಸ್ಟ್ ಗಾರ್ಡ್ ತನ್ನೆರಡು ಹೆಲಿಕಾಫ್ಟರ್ ಗಳೊಂದಿಗೆ ಗೋವಾ, ಮಹಾರಾಷ್ಟ್ರ ಹಾಗೂ ರತ್ನಗಿರಿಯ ಸಮುದ್ರದುದ್ದಕ್ಕೂ ಹುಡುಕಾಟ ನಡೆಸಿದೆ. ಇಂದು ನೌಕಾ ಪಡೆಯ ಹಡಗು ಹಾಗೂ ಸಿಬ್ಬಂದಿಗಳು ಸಹ ಹುಡುಕಾಟದಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರೊಂದಿಗೆ ಮಹಾರಾಷ್ಟ್ರ, ಗೋವಾ, ಕಾರವಾರ ಹಾಗೂ ಮಲ್ಪೆಯಿಂದ ತೆರಳಿದ ಮೀನುಗಾರರು ಸಹ ಬೋಟಿನ ಸುಳಿವಿಗಾಗಿ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
 
ಈವರೆಗೆ ನಾಪತ್ತೆಯಾದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟಿನ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಬೋಟಿನಲ್ದಿದ್ದ ಮೀನುಗಾರರ ಮನೆಯವರೊಂದಿಗೆ ನಾವು ಸಂಪರ್ಕದಲ್ಲಿದ್ದು, ಅವರಿಗೆ ಮಾಹಿತಿಗಳನ್ನು ನೀಡುತಿದ್ದೇವೆ ಎಂದು ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ತಿಳಿಸಿದ್ದಾರೆ.
 
ಬೋಟ್ ಅಪಹರಣದ ಶಂಕೆ:
ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ ಮೀನುಗಾರಿಕಾ ಬೋಟ್ ಅಪಹರಣ ಆಗಿರಬಹುದು ಎಂದು ಮೀನುಗಾರರು ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಸಹ ತನಿಖೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ  ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
 
‘ಸುವರ್ಣ ತ್ರಿಭುಜ’ ಎಂಬ ಬೋಟ್‌ನಲ್ಲಿ ಡಿ.13ರಂದು ರಾತ್ರಿ 11 ಗಂಟೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದು, 15ರಂದು ಮಧ್ಯರಾತ್ರಿ 1 ಗಂಟೆವರೆಗೆ ಸಂಪರ್ಕದಲ್ಲಿದ್ದವರು, ಬಳಿಕ ಕಾಣೆಯಾಗಿದ್ದಾರೆ. ಡಿ.13 ರಂದು  ನಾಪತ್ತೆಯಾದ ಬೋಟು ಸೇರಿದಂತೆ ಒಟ್ಟು 6 ಬೋಟುಗಳು ಒಟ್ಟಿಗೆ ಮೀನುಗಾರಿಕೆಗೆ ತೆರಳಿದ್ದು, ಅದರಲ್ಲಿ ಡಿ.15ಕ್ಕೆ 5 ಬೋಟುಗಳು ವಾಪಸ್ ಬಂದಿದೆ.  ಡಿ.16 ರಂದು ಬೋಟ್ ಬಾರದಿದ್ದ ಹಿನ್ನೆಲೆಯಲ್ಲಿ ಇತರೆ ಬೋಟುಗಳು ಸೇರಿ ಪುನಃ ತೆರಳಿ ಹುಡುಕಾಟ ನಡೆಸಿದ್ದಾರೆ. ಬೋಟು ಸಿಗದಿದ್ದಾಗ ಡಿ.20 ರಂದು ದೂರು ನೀಡಿದ್ದಾರೆ. ಭಾರತೀಯ ಕೋಸ್ಟ್‌ಗಾರ್ಡ್ ಕಾರ್ಯಚರಣೆ ಮುಂದುವರೆಸಿದ್ದು, ಡಿ.15 ರಂದು ರಾತ್ರಿ 1 ಗಂಟೆಗೆ ನಾಪತ್ತೆಯಾಗಿರುವ ಮೀನುಗಾರಿಕೆ ಬೋಟ್‌ನವರ ಮೊಬೈಲ್ ಸಿಗ್ನಲ್ ಮಹಾರಾಷ್ಟ್ರದ ಗಡಿಯಲ್ಲಿ ಕೊನೆಯ ಲೊಕೇಶನ್ ಸಿಕ್ಕಿದ್ದು, ಬಳಿಕ ಸ್ವಿಚ್ ಆಫ್ ಆಗಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ ಎಂದರು. 
 
ನೇವಿ, ಕೋಸ್ಟ್‌ಗೋರ್ಡ್ ಕಾರ್ಯಾಚರಣೆ 
ನಾಪತ್ತೆಯಾದ ಬೋಟಿನ ಪತ್ತೆಗೆ ಭಾರತೀಯ ನೌಕದಳ ಮತ್ತು ಕೋಸ್ಟ್‌ಗಾರ್ಡ್ ಪಡೆ  ಜಂಟಿ ಕಾರ್ಯಚರಣೆ ನಡೆಸುತ್ತಿದೆ. ಕೋಸ್ಟ್‌ಗಾರ್ಡ್‌ನ 2 ಹೆಲಿಕಾಪ್ಟರ್‌ಗಳು ನಿರಂತರ ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದೆ. ಮಂಗಳೂರು, ಗೋವಾ, ಮಹಾರಾಷ್ಟ್ರ ಕೋಸ್ಟ್‌ಗಾರ್ಡ್ ಸಹಕಾರದಲ್ಲಿ ಹುಡುಕಾಟ ನಡೆಯುತ್ತಿದೆ ಎಂದು ಡಿಸಿ ಮಾಹಿತಿ ನೀಡಿದರು.