ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಸಹಿತ ಏಳು ಮಂದಿ ಮೀನುಗಾರರು ನಾಪತ್ತೆಯಾಗಿ 46 ದಿನಗಳು ಕಳೆದಿದ್ದು, ಈ ಮಧ್ಯೆ ಎರಡು ಮೀನುಗಾರರ ಮೊಬೈಲ್ ರಿಂಗ್ ಆಗಿದೆ ಎಂಬ ಸುದ್ದಿಕೇಳಿ ಬಂದಿದೆ.
ಹೌದು, ನಾಪತ್ತೆಯಾಗಿರುವ ಏಳು ಮಂದಿ ಮೀನುಗಾರರ ಪೈಕಿ ಉತ್ತರ ಕನ್ನಡ ಜಿಲ್ಲೆಯ ರವಿ ಮಂಕಿ ಹಾಗೂ ಲಕ್ಷಣ್ ಎಂಬುವ ಮೀನುಗಾರರ ಮೊಬೈಲ್ ಎರಡು ಬಾರಿ ರಿಂಗ್ ಆಗಿದೆ ಎಂದು ಮನೆಯವರು ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಕಣ್ಮರೆಯಾಗಿರುವ ಲಕ್ಷಣ್ ಅವರ ಮೊಬೈಲ್ ಗೆ ಕರೆ ಮಾಡಿದ ಸಂದರ್ಭದಲ್ಲಿ ಎರಡು ರಿಂಗ್ ಆಗಿತ್ತು ಎನ್ನುತ್ತಾರೆ ಅವರ ಸಹೋದರ ಪಾಂಡು ಮೊಗೇರ. ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಮೊಬೈಲ್ ರಿಂಗ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ ರಿಂಗ್ ಆದ ಕೆಲವೇ ಕ್ಷಣದಲ್ಲಿ ಎರಡು ಮೊಬೈಲ್ಗಳು ಸ್ವಿಚ್ ಆಫ್ ಬರುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಪರಿಶೀಲಿಸಿದ್ದು, ನಾಪತ್ತೆಯಾದ ಮೊಬೈಲ್ ಸಂಖ್ಯೆಗಳಿಗೆ ಕರೆಗಳು ಹೋಗಿಲ್ಲ. ನಾಪತ್ತೆಯಾದ ಮೀನುಗಾರರ ಮೊಬೈಲ್ ಇದುವರೆಗೆ ಸ್ವಿಚ್ ಆನ್ ಆಗಿಲ್ಲ. ಮೊಬೈಲ್ ಟವರ್ ನಲ್ಲಿ ಸಿಗ್ನಲ್ ಜಂಪ್ ಆಗಿ ಇನ್ನೊಂದು ಮೊಬೈಲ್ ಸಂಖ್ಯೆಗೆ ಕರೆಗಳು ಹೋಗುವ ಸಾಧ್ಯತೆ ಇದೆ. ಈ ಬಗ್ಗೆ ಯಾವುದೇ ತಾಂತ್ರಿಕ ಸಾಕ್ಷ್ಯಗಳು ನಮ್ಮಲಿಲ್ಲ ಎಂದು ಅಲ್ಲಿನ ಪೊಲೀಸ್ ಮೂಲಗಳು ತಿಳಿಸಿವೆ.