ಸುವರ್ಣ ತ್ರಿಭುಜ ಬೋಟ್ ಕಣ್ಮರೆ ವಿಚಾರ ನನ್ನ ಗಮನಕ್ಕೆ ಬಂದೇ ಇಲ್ಲ: ಪೇಜಾವರ ಶ್ರೀ

ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ‘ಸುವರ್ಣ ತ್ರಿಭುಜ’ ಬೋಟ್ ಸಹಿತ ಏಳು ಮೀನುಗಾರರ ಕಣ್ಮರೆಯಾಗಿರುವ ಘಟನೆ ನಡೆದು 18 ದಿನಗಳಾಗಿದ್ದರೂ ಈ ವಿಚಾರ ನನ್ನ ಗಮನಕ್ಕೆ ಬಂದೇ ಇರಲಿಲ್ಲ. ಇವತ್ತು ವಿಷಯ ಗೊತ್ತಾಗಿದೆ. ಇದರಿಂದ ಮನಸ್ಸಿಗೆ ಅತ್ಯಂತ ಆತಂಕ ಆಗಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಇಂದು ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿ ಅದರಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬೋಟ್ ನಾಪತ್ತೆಯಾಗಿರುವ ವಿಷಯ ಪತ್ರಿಕೆಗಳಲ್ಲಿ ಬಂದಿರಬಹುದು. ಆದರೆ ಇದು ನನ್ನ ಗಮನಕ್ಕೆ ಬಂದೇ ಇಲ್ಲ. ಅಲ್ಲದೆ ಇದರ ಬಗ್ಗೆ ಯಾರು ಹೇಳಿಯೂ ಇಲ್ಲ. ಹಾಗಾಗಿ ಈ ಬಗ್ಗೆ ಸ್ಪಂದನೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಮೀನುಗಾರರ ರಕ್ಷಣೆಗೆ ಹಾಗೂ ಬೋಟ್ ಹುಡುಕಲು ನನ್ನಿಂದ ಏನೆಲ್ಲ ಕ್ರಮಕೈಗೊಳ್ಳಲು ಸಾಧ್ಯವಿದೆಯೋ ಅದನ್ನು ಕೈಗೊಂಡು, ಬೋಟ್ ಅನ್ನು ಶೀಘ್ರವಾಗಿ ಪತ್ತೆ ಹಚ್ಚಲು ಅಗತ್ಯ ಕ್ರಮಕೈಗೊಳ್ಳುವಂತೆ ಸರಕಾರದ ಮೇಲೆ ಒತ್ತಡ ತರುತ್ತೇವೆ. ಮೀನುಗಾರರೊಂದಿಗೆ ನಾವಿದ್ದೇವೆ. ಅವರ ದುಃಖದಲ್ಲಿ ನಾವು ಭಾಗಿಗಳಾಗಿದ್ದೇವೆ ಎಂದು ಶ್ರೀಗಳು ತಮ್ಮ ವಿಡಿಯೋ ಹೇಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಮುಂದಿನ ಕ್ರಮದ ಬಗ್ಗೆ ನಾನು ಉಡುಪಿಗೆ ಬಂದಾಗ ಮೀನುಗಾರ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.