ಸುವರ್ಣ ತ್ರಿಭುಜ ಬೋಟ್ ದುರಂತ: ಕೇಂದ್ರ ಸರ್ಕಾರ ನೌಕಾಪಡೆಯನ್ನು ರಕ್ಷಿಸಲು ಹೋಗಿ‌ ಮೀನುಗಾರರಿಗೆ ಅನ್ಯಾಯ ಮಾಡಿದೆ-ಗಣಪತಿ ಮಾಂಗ್ರೆ

ಉಡುಪಿ: ಏಳು ಮಂದಿ ಮೀನುಗಾರರು ಸಹಿತ ಸುವರ್ಣ ತ್ರಿಭುಜ ಬೋಟ್ ದುರಂತದಲ್ಲಿ ಸತ್ಯವನ್ನು ಮುಚ್ಚಿಡಲಾಗಿತ್ತು. ನೌಕಾಪಡೆಯನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನ್ಯಾಯ ಎಸಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರ್ಕೆಟಿಂಗ್ ಫೆಡರೇಶನ್‍ನ ಅಧ್ಯಕ್ಷ ಗಣಪತಿ ಮಾಂಗ್ರೆ ಆರೋಪಿದರು.

ಉಡುಪಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾಪಡೆಯ ಅಜಾಗರೂಕತೆಯಿಂದಲೇ ಈ ದುರ್ಘಟನೆ ನಡೆದಿತ್ತು. ಇದರಿಂದ ನೌಕಾಪಡೆಯ ನೌಕೆಗೂ ಹಾನಿಯಾಗಿತ್ತು. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ಅಂದು ಮುಚ್ಚಿಡಲಾಗಿತ್ತು. ಅವಘಡವನ್ನು ಮರೆಮಾಚುವ ಮೂಲಕ ಸರ್ಕಾರ ಮೀನುಗಾರರಿಗೆ ಮೋಸ ಮಾಡಿದೆ ಎಂದು ದೂರಿದರು.

ಮೃತ ಮೀನುಗಾರರ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರಕ್ಕೆ ಒತ್ತಾಯಿಸಿದ್ದೇವು. ರಾಜ್ಯದಿಂದ ಪರಿಹಾರ ಸಿಕ್ಕಿದೆ. ಆದರೆ ಕೇಂದ್ರದಿಂದ ಇನ್ನೂ ಪರಿಹಾರದ ಹಣ ಬಂದಿಲ್ಲ ಎಂದು ಕಿಡಿಕಾರಿದರು.

ಕಾರವಾರ ಪರ್ಸಿನ್ ಮೀನುಗಾರರ ಸಂಘದ ಮುಖಂಡ ನಿತಿನ್ ರಮಾಕಾಂತ್ ಗಾಂವ್ಕರ್, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಇದ್ದರು.