ಇಂದು ಮಹಿಳಾ ದಿನಾಚರಣೆ,ಅಪರೂಪದ ಸಾಧನೆಗೈದ ಮಹಿಳೆಯರನ್ನು ಹುಡುಕಿಕೊಂಡು ಹೊರಟಾಗ “ಉಡುಪಿ X press” ತಂಡಕ್ಕೆ ಸಿಕ್ಕ ಮೊದಲ ಕಲಾಮುತ್ತು ಸುಶ್ಮಿತಾ ಸಾಲಿಗ್ರಾಮ. ಮಹಿಳೆಯೆ0ದರೆ ಬದುಕಿಗೆ ಚೈತನ್ಯ ಶಕ್ತಿ, ಸ್ನೇಹದ ಅಕ್ಕರೆ, ಒಲವಿನ ಸಕ್ಕರೆ, ತಾಳ್ಮೆಯ ಕಡಲು, ಉಲ್ಲಾಸದ ಮುಗಿಲು, ಬದುಕಿನ ಪ್ರತೀ ಕ್ಷಣವೂ ಮಹಿಳೆ ನಮಗೆಲ್ಲಾ ಸ್ಪೂರ್ತಿ, ಶಕ್ತಿ. ಮಹಿಳೆಯಿಲ್ಲದೇ ನಮ್ಮ ಬದುಕು ನಡೆಯೋದು ಸಾಧ್ಯವೇ ಇಲ್ಲ.ಬರೀ ಮಾರ್ಚ್-8 ಮಾತ್ರವಲ್ಲ ಯಾವಾಗಲೂ ಮಹಿಳೆಯರ ಶಕ್ತಿ ನಮಗೆ ಕಾಡುತ್ತಲೇ ಇರಬೇಕು. ಈ ಇಡೀ ಮಾರ್ಚ್ ತಿಂಗಳು “ಉಡುಪಿ X press ಕರಾವಳಿ ಕಣ್ಮಣಿ “ಎನ್ನುವ ಸರಣಿಯಲ್ಲಿ ವಿವಿಧ ಸಾಧಕ ಮಹಿಳೆಯರನ್ನು ನಿಮಗೆ ಪರಿಚಯಿಸಲಿದೆ. ಅವರ ಸಾಧನೆ-ಹಾದಿ ನಮಗೆಲ್ಲಾ ಸ್ಪೂರ್ತಿಯಾಗಲಿ.
ಯಕ್ಷಗಾನದಲ್ಲಿ ಮಿಂಚುತ್ತಿರುವ ಅದ್ಬುತ ಪ್ರತಿಭೆ ಸಾಲಿಗ್ರಾಮದ ಸುಶ್ಮಿತಾ ಎನ್ನುವ ಬೆರಗುಗಣ್ಣಿನ ಯುವತಿ. ಸಾಲಿಗ್ರಾಮದ ಕೃಷ್ಣಮೂರ್ತಿ ಮರಕಾಲ ಹಾಗೂ ಲಕ್ಷ್ಮೀ ದಂಪತಿಯ ಪುತ್ರಿಯಾದ ಸುಶ್ಮಿತಾ ಸಾಲಿಗ್ರಾಮ ಇವರಿಗೆ ಬಾಲ್ಯದಿಂದಲೂ ಯಕ್ಷಗಾನವೆಂದರೆ ಜೀವ, ಚಿತ್ರಪಾಡಿ ಶಾಲೆಗೆ ಸ್ವಲ್ಪ ಸಮಯ ಬರುತ್ತಿದ್ದ ಗುರುಗಳಲ್ಲಿ ಇವರು ಅಭ್ಯಾಸ ಆರಂಭಿಸಿದರು, ನಾಲ್ಕನೇ ತರಗತಿಯಿಂದ ಯಕ್ಷಗಾನದ ಶಾಸ್ತ್ರೀಯ ಅಭ್ಯಾಸ ಆರಂಭಿಸಿ ಕಲಿಕೆಯ ಹಾದಿ ತುಳಿದರು. ಸುಶ್ಮಿತಾ“ಮಾಯಾಮೃಗ ,ಯಕ್ಶೋತ್ಸಹಿ ಅಧ್ಯಯನಕೇಂದ್ರದ ಮೂಲಕ ತಮ್ಮ ಯಕ್ಷ ಪ್ರತಿಭೆಯನ್ನು ಅಜರಾಮರಗೊಳಿಸಿದ್ದಾರೆ.ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಮುಗಿಸಿರುವ ಇವರ ಯಕ್ಷಗಾನ ನಾಟ್ಯ ವೈಭವಕ್ಕೆ ವಿದ್ಯಾನಗರಿ ಮೂಡುಬಿದಿರೆಯೂ ವೇದಿಕೆಯಾಯಿತು. ನೂರಾರು ವೇದಿಕೆಗಳಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಇಟ್ಟವರು, ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಪುರಸ್ಕಾರ, ಪ್ರಶಸ್ತಿಗಳನ್ನು ಬಾಚಿದವರು, ನೂರಾರು ಪಾತ್ರಗಳಿಗೆ ಬಣ್ಣ ಹಾಕಿದವರು, ತಮ್ಮ ಭಾವ-ಭಂಗಿ, ಕುಣಿತಗಳ ಮೂಲಕವೇ ಯಕ್ಷಾಭಿಮಾನಿಗಳ ಕಣ್ಣಲ್ಲಿ ಬೆರಗಾದ ಈ ಯುವ ಕಲಾವಿದೆ ಸುಶ್ಮಿತಾ ಸಾಲಿಗ್ರಾಮ ಅವರಿಗೆ ಸಾಧಿಸುವ ಹಂಬಲ ಜಾಸ್ತಿ,
ಪ್ರತಿಭೆಯ ಗಣಿ: ಇದುವರೆಗೆ ಸುಭದ್ರೆ , ದುರ್ಯೋಧನ , ಲಕ್ಷ್ಮೀ , ಸೀತೆ , ಮಾಯಶೂರ್ಪಣಕಿ , ಕೃಷ್ಣ , ಪುಣ್ಯಕೋಟಿ , ಬಡಗಿನ ಪುಂಡು ವೇಷಗಳನ್ನು ಹಾಗೆಯೇ ಆಳ್ವಾಸ್ ನೃತ್ಯ ತಂಡದಲ್ಲಿ ಸಹದೇವ ಬ್ರಹ್ಮ ನೃತ್ಯ ರೂಪಕದಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ .ಇತರೆ ಸಮಯದಲ್ಲಿ ಚಿತ್ರಕಲೆ , ಕವನ ಬರೆಯುವುದು , ಜಾನಪದ ನೃತ್ಯ ಇವೆಲ್ಲವನ್ನು ಹವ್ಯಾಸಮಾಡಿಕೊಂಡಿರುವ ಈಕೆ ಪ್ರತಿಭೆಗಳ ಗಣಿ.
ಈ ಹುಡುಗಿಯ ಕನಸೇನು?
ತನ್ನ ಹೆತ್ತವರಿಗೆ ಒಳ್ಳೆಯ ಮಗಳಾಗಿ , ಯಕ್ಷಗಾನ ಆಸಕ್ತಿ ಇರೋ ಮಕ್ಕಳಿಗೆ ಯಕ್ಷಗಾನ ಕಳಿಸಿಕೊಡುವ, ಮತ್ತು ಯಕ್ಷಗಾನದಲ್ಲಿ ಇನ್ನಷ್ಟು ತಿಳಿದುಕೊಳ್ಳುವ ಆಸೆ ಮತ್ತು ಕನಸು ಇವರದ್ದು. ತಾನು ಕಲಿತ ಪ್ರಾಥಮಿಕ ಶಾಲೆಯಲ್ಲಿ ಪುಣ್ಯಕೋಟಿ ಎಂಬ ಯಕ್ಷಗಾನ ರೂಪಕವನ್ನು ಕೇಳಿಕೊಟ್ಟು ಅದು ಈಗಾಗಲೇ ಎರಡು ಪ್ರದರ್ಶನ ಕಂಡಿದೆ.
ಪ್ರಸ್ತುತ ಡಾ. ಜಿ. ಶಂಕರ್ ಮಹಿಳಾ ಕಾಲೇಜು , ಅಜ್ಜರಕಾಡು ಇಲ್ಲಿ ಎಂ.ಕಾಮ್ ಪದವಿಯನ್ನು ಕಲಿಯುತ್ತಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿವೆ. ಅನೇಕ ಪ್ರಶಸ್ತಿಗಳು ಇವರ ಜೋಳಿಗೆ ಸೇರಿವೆ.
ತಪ್ಪುಗಳನ್ನು ತಿದ್ದಿಸಿ, ಬೆಳೆಸಿ ತಂದೆ-ತಾಯಿಯೇ ಇವರಿಗೆ ಸ್ಪೂರ್ತಿಯಂತೆ.ಪ್ರತಿಯೊಬ್ಬ ಕಲಾವಿದರಿಗೂ ಅನೇಕ ಅವಮಾನಗಳ ಮೆಟ್ಟಿಲುಗಳು ಎದುರಾಗುತ್ತವೆ, ಅದನೆಲ್ಲವನ್ನು ಮೆಟ್ಟಿ ನಿಂತರೆ ಮಾತ್ರ ಮೇಲೇರಿ ಯಶಸ್ಸು ಸಾಧಿಸಲು ಆಗುತ್ತದೆ ಎನ್ನುವುದು ಇವರ ಮಾತು. ಯಕ್ಷಲೋಕಕ್ಕೆ ಹೊಸತೇನಾದರೂ ಕೊಡಬೇಕು ಎನ್ನುವ ಸ್ಪೂರ್ತಿಯಿಂದ ಇದೀಗ ಹವ್ಯಾಸಿ ಕಲಾವಿದೆಯಾಗಿ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದಾರೆ. ಅವರ ಪ್ರತಿಭೆಗೆ ನಿಮ್ಮದ್ದೊಂದು ಪುಟ್ಟ ಸಲಾಂ ಬೇಕೇ ಬೇಕು.
ಬರಹ :ಮಂಜುನಾಥ್ ಶೆಣೈ, ಉಡುಪಿ