ಸಾರಿಗೆ ನೌಕರರ ಮುಷ್ಕರವನ್ನು ದುರದೃಷ್ಟಕರ ಎಂದಿರುವ ಕುಯಿಲಾಡಿ ಸುರೇಶ್ ಕುಮಾರ್ ಹೇಳಿಕೆಯೇ ದುರದೃಷ್ಟಕರ: ರಮೇಶ್ ಕಾಂಚನ್ ತಿರುಗೇಟು

ಉಡುಪಿ: ಸಾರಿಗೆ ನೌಕರರ ಮುಷ್ಕರದ ಬಗ್ಗೆ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಕೋಶಾಧಿಕಾರಿ ಕುಯಿಲಾಡಿ ಸುರೇಶ್ ಕುಮಾರ್ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಹಾಗೂ ನಗರಸಭಾ ಸದಸ್ಯ ರಮೇಶ್ ಕಾಂಚನ್ ತಿರುಗೇಟು ನೀಡಿದ್ದಾರೆ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರಸ್ತೆ ಸಾರಿಗೆ ನೌಕರರು ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮುಷ್ಕರದಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದು ದುರದೃಷ್ಟಕರ ಎಂದು ಕುಯಿಲಾಡಿ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರಮೇಶ್ ಕಾಂಚನ್, ಕುಯಿಲಾಡಿ ಹೇಳಿಕೆಯೇ ದುರದೃಷ್ಟಕರ ಎಂದು ಟಾಂಗ್ ನೀಡಿದ್ದಾರೆ.

ಪ್ರಮೋದ್ ಮಧ್ವರಾಜ್ ಸಚಿವರಾಗಿದ್ದ ಸಮಯದಲ್ಲಿ ಗ್ರಾಮೀಣ ಭಾಗಕ್ಕೂ ನರ್ಮ್ ಬಸ್ ಓಡಿಸುವ ಮೂಲಕ ಖಾಸಗಿ ಬಸ್ ಗಳು ಸೇವೆ ನೀಡದ ಪ್ರದೇಶದಲ್ಲಿ ಸರ್ಕಾರಿ ಬಸ್ ಓಡಿಸಿ ಗ್ರಾಮೀಣ ಭಾಗದ ಜನರಿಗೆ ಭಾರೀ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಬಿಜೆಪಿ ಸರಕಾರ ಬಂದ‌ ಮೇಲೆ ಜಿಲ್ಲೆಯ ಜನಪ್ರತಿನಿಧಿಗಳ ಕುಮ್ಮಕ್ಕು, ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ನರ್ಮ್ ಬಸ್ ಗಳ ಓಡಾಟ ನಿಂತು ಹೋಗಿದೆ. ಇದರಲ್ಲಿ ಖಾಸಗಿ ಬಸ್ ಗಳ ಲಾಬಿ ಎದ್ದು ತೋರುತ್ತಿದೆ. ಈಗಲೂ ಖಾಸಗಿ ಬಸ್ ಗಳು ಗ್ರಾಮೀಣ ಭಾಗದಲ್ಲಿ ಸರಿಯಾಗಿ ಸಂಚರಿಸದೇ ಜನರು ಪರದಾಡುತ್ತಿರುವುದು ದುರದೃಷ್ಟಕರ ಎಂದು ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಯಿಲಾಡಿ ಸುರೇಶ್ ನಾಯಕ್ ರಾಜ್ಯ ರಸ್ತೆ ಸಾರಿಗೆ ನೌಕರರ ಪ್ರತಿಭಟನೆಯಲ್ಲೂ ತಮ್ಮ ಲಾಭವನ್ನು ನೋಡುತ್ತಿದ್ದಾರೆ. ಸರಕಾರಿ ಬಸ್ ಗಳ ಓಡಾಟ ಇವರಿಗೆ ಬೇಕಿಲ್ಲ. ಈ ಪ್ರತಿಭಟನೆಯನ್ನೇ ಅಸ್ತ್ರ ಮಾಡಿಕೊಂಡು ರಾಜ್ಯದಾದ್ಯಂತ ಖಾಸಗಿ ಬಸ್ ಓಡಾಟ ಮಾಡುವ ಹುನ್ನಾರ ಅಡಗಿದ್ದು, ಸರಕಾರ ತಕ್ಷಣ ನೌಕರರ ಎಲ್ಲಾ ಬೇಡಿಕೆಯನ್ನು ಇಡೇರಿಸಬೇಕು. ಎಲ್ಲಾ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ಸರಕಾರಿ ಬಸ್ ಗಳು ಓಡಾಡುವಂತೆ ಕ್ರಮ ಕೈಗೊಳ್ಳುವಂತೆ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.