ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಯ ವಿವಾಹಗಳು ಅಸಿಂಧು: ಸುಪ್ರೀಂಕೋರ್ಟ್

ನವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಗಳ ನಡುವಿನ ಯಾವುದೇ ವಿವಾಹವು ಅಸಿಂಧು ಮತ್ತು ಹಿಂದೂಗಳು ಮಾತ್ರ ಅದೇ ಕಾನೂನಿನ ಅಡಿಯಲ್ಲಿ ಮದುವೆಯಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2017ರ ಆಗಸ್ಟ್‌ನಲ್ಲಿ ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿಗೆ ಮುಂದೂಡಿದೆ.

ಅರ್ಜಿದಾರರು ಕ್ರಿಶ್ಚಿಯನ್ ಮತದವರಾಗಿದ್ದು, ದೂರುದಾರ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ.

ಮಹಿಳೆಯು ದೂರಿನಲ್ಲಿ ವ್ಯಕ್ತಿಯು ತನ್ನನ್ನು ಹಿಂದೂ ಪದ್ದತಿಯಲ್ಲಿ ವಿವಾಹವಾಗಿದ್ದು, ತನ್ನೊಂದಿಗೆ ವಿವಾಹ ಸಂಬಂಧ ಹೊಂದಿದ್ದಾಗಲೆ ಇನ್ನೊಬ್ಬ ಮಹಿಳೆಯನ್ನು ವಿವಾಹವಾಗಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿದಾರರು ತಾನು ಆಕೆಯನ್ನು ಮದುವೆಯೇ ಆಗಿಲ್ಲ, ತಮಗೆ ಮದುವೆ ಆಗಿದೆ ಎನ್ನುವುದಕ್ಕೆ ಮಹಿಳೆಯು ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ. ತನ್ನ ಮೇಲೆ ಮಾಡಿರುವ ಆರೋಪ ನಿರಾಧಾರ ಮತ್ತು ಕಪೋಲಕಲ್ಪಿತ. ಆದ್ದರಿಂದ ತಮ್ಮ ವಿರುದ್ದ ನೀಡಲಾಗಿರುವ ದೂರನ್ನು ವಜಾಗೊಳಿಸಬೇಕೆಂದು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 494 ರ ಅಡಿಯಲ್ಲಿ ಅರ್ಜಿದಾರರ ವಿರುದ್ಧದ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದೆ.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 494 ವ್ಯವಹರಿಸುತ್ತದೆ, ಪತಿ ಅಥವಾ ಪತ್ನಿಯನ್ನು ಹೊಂದಿರುವವರು, ಅವರ ಜೀವಿತಾವಧಿಯಲ್ಲಿರುವಾಗಲೇ ವಿಚ್ಛೇದನ ಪಡೆಯದೆ ಮತ್ತೊಂದು ಮದುವೆಯಾದಲ್ಲಿ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಗೆ ಸೆರೆವಾಸ ಮತ್ತು ದಂಡಕ್ಕೆ ಹೊಣೆಗಾರರಾಗಿರುತ್ತಾರೆ.

ಅರ್ಜಿದಾರರ ವಿರುದ್ಧ 2013 ರಲ್ಲಿ ಐಪಿಸಿ ಸೆಕ್ಷನ್ 494, 1860 ರ ಅಡಿಯಲ್ಲಿ ಹೈದರಾಬಾದ್‌ನಲ್ಲಿ ದೂರು ದಾಖಲಿಸಲಾಗಿದ್ದು, ಅರ್ಜಿದಾರರು ಫೆಬ್ರವರಿ 2008 ರಲ್ಲಿ ದೂರುದಾರರನ್ನು ಹಿಂದೂ ವಿಧಿಗಳ ಪ್ರಕಾರ ವಿವಾಹವಾಗಿದ್ದಾರೆ ಮತ್ತು ಅವರ ವಿವಾಹವು 1955 ರ ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಜೋಡಿಗಳು ವಿವಾಹಿತರಾಗಿದ್ದ ಪಕ್ಷದಲ್ಲಿಯೂ ಈ ಮದುವೆ ಅಸಿಂಧುವಾಗುತ್ತದೆ. ಅರ್ಜಿದಾರ ಕ್ರಿಶ್ಚಿಯನ್ ಮತದವರಾಗಿದ್ದು ಅವರು ಹಿಂದೂ ಧರ್ಮಕ್ಕೆ ಮತಾಂತರವಾಗಿಲ್ಲ. ಹೀಗಾಗಿ ಹಿಂದೂ ಧರ್ಮದ ಪ್ರಕಾರ ಮದುವೆಯಾಗಿದ್ದರೂ ಅದು ಅಸಿಂಧು ಎನಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.