ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ ಕೇಂದ್ರ: ಪೋಷಕ ದಾಖಲೆಗಳನ್ನು 10 ವರ್ಷಗಳಿಗೊಮ್ಮೆ ನವೀಕರಿಸಿ

ನವದೆಹಲಿ: ಕೇಂದ್ರ ಸರ್ಕಾರವು ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಆಧಾರ್ ದಾಖಲಾತಿ ದಿನಾಂಕದಿಂದ 10 ವರ್ಷ ಪೂರ್ಣಗೊಂಡ ನಂತರ ಆಧಾರ್ ಹೊಂದಿರುವವರು ಒಮ್ಮೆಯಾದರೂ ಪೋಷಕ ದಾಖಲೆಗಳನ್ನು ನವೀಕರಿಸಬೇಕು ಎಂದು ನಿರ್ದಿಷ್ಟಪಡಿಸಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ ಆಧಾರ್-ಸಂಬಂಧಿತ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸುತ್ತದೆ.

ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ10 ವರ್ಷ ಪೂರ್ಣಗೊಂಡ ನಂತರ, ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೋಷಕ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬೇಕು. ಸಿಐಡಿಆರ್ ನಲ್ಲಿ ಅವರ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಈ ನಿಯಮಗಳನ್ನು ಜಾರಿಗೊಳಿಸಿದೆ. ಹಾಗಾಗಿ, ಆಧಾರ್ ಕಾರ್ಡ್ ಮಾಡಿಸಿಕೊಂಡು ಅದಾಗಲೇ ಹತ್ತು ವರ್ಷಗಳು ಪೂರ್ಣವಾಗಿದ್ದರೆ ಅಂತಹವರು ಆಧಾರ್ ಕಾರ್ಡ್ ನವೀಕರಣ ಮಾಡಲು ಅರ್ಜಿ ಸಲ್ಲಿಸಬಹುದು.

ಈ ನಿಟ್ಟಿನಲ್ಲಿ ಆಧಾರ್ ಹೊಂದಿರುವವರಿಗೆ ನವೀಕರಣ ಸೌಲಭ್ಯವನ್ನು ಒದಗಿಸಲು, ಯುಐಡಿಎಐಯು ‘ಅಪ್‌ಡೇಟ್ ಡಾಕ್ಯುಮೆಂಟ್’ ಎಂಬ ಹೊಸ ಆಯ್ಕೆಯನ್ನು ಅಭಿವೃದ್ಧಿಪಡಿಸಿದೆ. myAadhaar ಪೋರ್ಟಲ್ ಮೂಲಕ ಈ ಆಯ್ಕೆಯನ್ನು ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದು ಮತ್ತು myAadhaar ಅಪ್ಲಿಕೇಶನ್ ಅಥವಾ ಹತ್ತಿರದ ಯಾವುದೇ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಬಹುದು.