ಕರಾವಳಿಗೆ ಅಪ್ಪಳಿಸಿತು “ಕೆಜಿಎಫ್” ಸುನಾಮಿ : ಸಿನಿಮಾ ನೋಡಿ ಹುಚ್ಚೆದ್ದರು ಕರಾವಳಿ ಪ್ರೇಕ್ಷಕರು

ಉಡುಪಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕರಾವಳಿಯಲ್ಲೂ ಭರ್ಜರಿ ಸದ್ದು ಮಾಡಿದೆ. ಶುಕ್ರವಾರ ಬೆಳಗ್ಗಿನಿಂದಲೇ ಉಡುಪಿಯ ಅಲಂಕಾರ್, ಇನಾಕ್ಸ್ , ಪಿವಿಆರ್, ಕಾರ್ಕಳದ ರಾಧಿಕಾ, ಕುಂದಾಪುರದ ವಿನಾಯಕ ಥಿಯೇಟರ್ ಗಳ ಮುಂದೆ ಕೆಜಿಎಫ್ ನೋಡಲೆಂದೇ ಯಶ್ ಅಭಿಯಾನಿಗಳು ಜಾತ್ರೆಯಂತೆ ಲಗ್ಗೆ ಇಟ್ಟಿದ್ದಾರೆ. ಕಾಲೇಜಿನ ಪಡ್ಡೆಗಳು ಬಂಕ್ ಹಾಕಿ ಥಿಯೇಟರ್ ಗೆ ಜಮಾಯಿಸಿದ್ದಾರೆ. ಬೆಳಗ್ಗೆ, ಹಾಗೂ ಮದ್ಯಾಹ್ನದ ಶೋ ಗಳೂ ಹೌಸ್ ಫುಲ್ ಆಗಿದ್ದು ಕೆಲ ಸಿನಿಮಾ ಪ್ರಿಯರು ಟಿಕೇಟ್ ಸಿಗದೇ ಪರದಾಡಬೇಕಾಗಿ ಬಂತು. ಶನಿವಾರ, ಭಾನುವಾರಗಳಲ್ಲೂ ಯಶ್ ಅಭಿಮಾನಿಗಳು ಜಾತ್ರೆಯಂತೆ ಥಿಯೇಟರ್ ಗೆ ಜಮಾಯಿಸುವುದು ಖಚಿತವಾಗಿದೆ.

ಎಲ್ಲೆಲ್ಲೂ ಕೆಜಿಎಫ್ ಬಿರುಗಾಳಿ;

ಪ್ರಶಾಂತ್ ನೀಲ್ ನಿರ್ದೇಶಿಸಿರುವ ಈ ಸಿನಿಮಾ ನೋಡಿದ ಪ್ರೇಕ್ಷಕರು “ಇಂತಹ ಸಿನಿಮಾ ನಾವೆಲ್ಲಿಯೂ ನೋಡಿಲ್ಲ, ಅಷ್ಟು ಜಬರ್ ದಸ್ತ್ ಆಗಿದೆ. ಇಷ್ಟು ಅದ್ಬುತವಾಗಿರುತ್ತದೆ ಎಂದು ನಿರೀಕ್ಷೆಯೂ ಮಾಡಿರಲಿಲ್ಲ. ಪ್ರತೀ ಕ್ಷಣವೂ ಸಿನಿಮಾ ಮೈ ನವಿರೇಳಿಸುವಂತಿದೆ. ಹ್ಯಾಟ್ಸ್ ಆಫ್ ಕೆಜಿಎಫ್ ಎಂದು ಸಖತ್ ಥ್ರಿಲ್ಲಾಗಿ ಹೇಳುತ್ತಿದ್ದಾರೆ.

ರವಿ ಬಸ್ರೂರು ಅವರ ಸಾಹಿತ್ಯ ಸಂಗೀತ, ಸಖತ್ ಸದ್ದು ಮಾಡಿದೆ. ಧೀರ ಧೀರ ಹಾಡು ಪ್ರೇಕ್ಷಕನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಹುಚ್ಚೆದ್ದ ಪ್ರೇಕ್ಷಕ ಪ್ರಭು:

 ವಾರದ ಹಿಂದೆಯೇ ಟಿಕೇಟ್  ಬುಕ್ ಮಾಡಿ ಈ ಸಿನಿಮಾಗೆ ಬರುತ್ತಿದ್ದೇವೆ, ಬೆಳಗ್ಗೆ ಒಂದು ಸಲ ಸಿನಿಮಾ ನೋಡಿಯಾಯಿತು. ಈಗ ಮತ್ತೆ ಸಿನಿಮಾ ನೋಡುವ ಆಸೆಯಿಂದ ಮಂಗಳೂರಿನ ಥಿಯೇಟರ್ ಗೆ ಹೋಗುತ್ತಿದ್ದೇವೆ. ಎಷ್ಟು ನೋಡಿದರೂ ಸಾಲಲ್ಲ ಈ ಸಿನಿಮಾ, ಬಾಹುಬಲಿ ಸಿನಿಮಾವನ್ನು ಮೀರಿಸುವಂತಿದೆ ಕೆಜಿಎಫ್ ಎಂದು ಉಡುಪಿಯ ಪ್ರೇಕ್ಷರೊಬ್ಬರು ಸಿನಿಮಾ ನೋಡಿ ದಿಲ್ ಖುಷ್ ಆಗಿದ್ದಾರೆ.

ಒಟ್ಟಾರೆ ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ಎಲ್ಲೆಲ್ಲೂ ಕೆಜಿಎಫ್ ನೋಡಲು ಜನವೋ ಜನ, ಹುಚ್ಚೆದ್ದ ಪ್ರೇಕ್ಷಕನ ಮನ ಎನ್ನುವಂತಾಯಿತು.ಇಷ್ಟು ದಿನ ತಮಿಳು, ತೆಲುಗು ಸಿನಿಮಾಗಳಿಗೆ ಇರುವೆಯಂತೆ ಮುತ್ತುತ್ತಿದ್ದ ಕರಾವಳಿ ಪ್ರೇಕ್ಷಕರು ಬಹುಕಾಲದ ಬಳಿಕ ಕನ್ನಡ ಸಿನಿಮಾವೊಂದಕ್ಕೆ ಹೀಗೆ ಜಾತ್ರೆಯಂತೆ ಮುತ್ತಿರುವುದು ಕನ್ನಡ ಸಿನಿಮಾ ಲೋಕಕ್ಕೆ ಸಿಕ್ಕ ದೊಡ್ಡ ಗೆಲುವು ಎನ್ನಲೇಬೇಕು.

ಕರಾವಳಿ ಪ್ರೇಕ್ಷಕರು ಏನಂತಾರೆ?

“ಕೆಜಿಎಫ್ ಅದ್ಬುತ ಸಿನಿಮಾ, ಪ್ರತೀ ಕ್ಷಣವೂ ಕಣ್ಣು ನೋಡುವಂತೆ ಮಾಡಿದ ಸಿನಿಮಾ, ಇಂತಹ ಸಿನಿಮಾವನ್ನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ, ಕತೆಯಿಂದ ಹಿಡಿದು ಹಾಡಿನ ವರೆಗೂ ಕೆಜಿಎಫ್ ಭರ್ಜರಿ ಸಿಕ್ಸರ್ ಬಾರಿಸಿದೆ. ಜಾಸ್ತಿ ಕೆಜಿಎಫ್ ಬಗ್ಗೆ ವರ್ಣಿಸಲು ಸಾಧ್ಯವಾಗುತ್ತಿಲ್ಲ.ನೀವೇ ಒಮ್ಮೆ ಸಿನಿಮಾ ನೋಡಿ ಸೂಪರ್ಬ್ ಎನ್ನದೇ ಇರುವುದಿಲ್ಲ.ಕುಂದಾಪುರದ ರವಿ ಬಸ್ರೂರು ಸಂಗೀತ ಅದ್ಬುತವಾಗಿದೆ”.

ಗಿರೀಶ್ ಭಟ್ ಮಾರ್ಪಳ್ಳಿ

—————————————————————————————————-

“ಅಬ್ಬಾ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗವನ್ನು ದೊಡ್ಡ ಗೆಲುವಿನತ್ತ ದಾಟಿಸುವ ಸಿನಿಮಾ, ಕತೆ ಅದ್ಬುತವಾಗಿದೆ. ಆಕ್ಷನ್ ಸಖತ್. ಫೈಟ್,ಕಾಮಿಡಿ ಟಾಪ್.ಇಂತಹ ಸಿನಿಮಾ ನಾನಂತೂ ಈವರೆಗೆ ನೋಡಿಲ್ಲ ಅಷ್ಟು ಸೂಪರ್ರಾಗಿದೆ ಕೆಜಿಎಫ್”.

ಸುಧೀರ್ ಕುಮಾರ್, ಬನ್ನಂಜೆ

—————————————————————————————————-

“ಯಶ್ ಅಭಿನಯ, ಡೈಲಾಗ್ ಡೆಲಿವರಿ ಸೂಪರ್, ನಿರ್ದೇಶಕರ ಕೈಚಳಕ ಎದ್ದು ಕಾಣುತ್ತಿದೆ. ಕುಂದಾಪುರದ ರವಿ ಬಸ್ರೂರು ಅವರ ಸಂಗೀತ ಕಿವಿಗಪ್ಪಳಿಸುತ್ತದೆ. ಒಟ್ಟಾರೆ ಸಿನಿಮಾ ಎಷ್ಟು ದಿನ ಓಡುತ್ತೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ೧೦೦ ದಿನ ಮೀರಿಸೋದು ಗ್ಯಾರಂಟಿ”.

ಮಂಜುನಾಥ್,ಚಿಪ್ಪಾಡಿ

—————————————————————————————————

“ಸಖತ್ ಚಿಂದಿ ಉಡಾಯಿಸಿದ ಸಿನಿಮಾ ಕೆಜಿಎಫ್, ಆರಂಭದಿಂದ ಅಂತ್ಯದವರೆಗೂ ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ. ಎಲ್ಲರೂ ನೋಡಲೇಬೇಕಾದ ಅದ್ಬುತ ಸಿನಿಮಾ ಇದು. ಒಮ್ಮೆ ಸಿನಿಮಾ ಮಂದಿರಕ್ಕೆ ಹೋಗಿ ನೋಡಿ, ಆ ಮೇಲೆ ನೀವೇ ಹೇಳ್ತೀರಾ ಕೆಜಿಎಫ್ ಸಖತ್ ಇದೆ ಅಂತ”.

-ಪ್ರಜ್ವಲ್ ಗಂಗೊಳ್ಳಿ