ಸೀಮಿತ ಕಲಾತಂಡಗಳೊದಿಗೆ ಸರಳವಾಗಿ ಪರ್ಯಾಯೋತ್ಸವ ಮೆರವಣಿಗೆ ನಡೆಸಲು ತೀರ್ಮಾನ: ನಗರದಲ್ಲಿ ಸಚಿವ ಸುನಿಲ್ ಕುಮಾರ್

ಕೋವಿಡ್ ಹಿನ್ನೆಲೆಯಲ್ಲಿ ಜನರ ಆರೋಗ್ಯದ ದೃಷ್ಟಿಯಿಂದ ಹಾಗೂ ಭಾವೀ ಪರ್ಯಾಯ ಶ್ರೀಗಳ ಅಪೇಕ್ಷೆಯಂತೆ ಸೀಮಿತ ಕಲಾತಂಡಗಳೊದಿಗೆ ಪರ್ಯಾಯೋತ್ಸವ ಮೆರವಣಿಗೆ, ಧಾರ್ಮಿಕ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸೋಮವಾರ ನಗರ ಜಿಪಂ ಸಭಾಂಗಣದಲ್ಲಿ ನಡೆದ ಪರ್ಯಾಯೋತ್ಸವ ಸಮಿತಿ ಹಾಗೂ ಅಧಿಕಾರಿಗಳ ಸಭೆಯ ಬಳಿಕ, ಸಚಿವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.  ಸಾರ್ವಜನಿಕರ ಪ್ರವೇಶಕ್ಕೆ ನಿಬಂಧನೆ ಹಾಕಲಾಗಿದ್ದು, ಹೆಚ್ಚು ಜನ ಸೇರಿದಂತೆ ಈಗಾಗಲೇ ಮನವಿ ಮಾಡಲಾಗಿದೆ. ವೈಭೋಗದಿಂದ ಪರ್ಯಾಯೋತ್ಸವ ಆಯೋಜಿಸಲು ಸಿದ್ಧತೆ ಮಾಡಿಕೊಂಡಿದ್ದರೂ ಕೋವಿಡ್ ನಿಂದಾಗಿ ಅನಿವಾರ್ಯವಾಗಿ ಸರಳೀಕರಣ ಮಾಡಲಾಗಿದೆ ಎಂದರು.

ಜ. 17ರಂದು ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 9 ಗಂಟೆಯೊಳಗೆ ಮುಗಿಸಲಾಗುತ್ತದೆ. ಜೋಡುಕಟ್ಟೆಯಿಂದ ಆರಂಭವಾಗುವ ಪರ್ಯಾಯೋತ್ಸವ ಮೆರವಣಿಗೆಯಲ್ಲೂ ಸೀಮಿತ ಕಲಾತಂಡ, ಸೀಮಿತ ಸಂಖ್ಯೆಯ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಉಡುಪಿಯ ನಾಗರಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಚಿವರು ಮನವಿ ಮಾಡಿದರು.

ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಸಭೆ, ಸಮಾರಂಭ, ಕಾರ್ಯಕ್ರಮ ಆಯೋಜನೆ ಮಾಡುವುದು ಬೇಡ. ಕರಾವಳಿಯಲ್ಲಿ ನಡೆಯುವ ಕಂಬಳ, ಉತ್ಸವಕ್ಕೂ ಸ್ವಲ್ಪ ಕಾಲ ಕಡಿವಾಣ ಹಾಕುವುದು ಒಳಿತು. ಪ್ರವಾಸಿ ತಾಣಗಳ ಮೇಲೂ ನಿಗಾ ಇರಿಸಲಾಗಿದ್ದು, ಕಡಲ ಕಿನಾರೆಗಳಲ್ಲಿ ರಾತ್ರಿ 7 ಗಂಟೆಯಿಂದ ಪ್ರವೇಶ ನಿರಾಕರಿಸಿ ನಿರ್ಬಂಧನೆ ವಿಧಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.