ಸುಳ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಮೂವರು ಮುಖಂಡರ ಉಚ್ಚಾಟನೆ

ಮಂಗಳೂರು: ಸುಳ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಪಕ್ಷ ವಿರೋಧಿ ಚಟುವಟಿಕೆಯ ಹಿನ್ನೆಲೆಯಲ್ಲಿ ಮೂವರು ಮುಖಂಡರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದೇವಚಳ್ಳ ಗ್ರಾಪಂ ಸದಸ್ಯ ಶೈಲೇಶ್ ಅಂಬೆಕಲ್ಲು, ನಲ್ಲೂರು ಕೆಮ್ರಾಜೆ ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ತೊಡಿಕಾನ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

ಪಕ್ಷದೊಳಗೆ ಎದ್ದಿರುವ ಭಿನ್ನಮತ ಸದ್ಯ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಇನ್ನೋರ್ವ ಮುಖಂಡನಿಗೂ ಉಚ್ಚಾಟನೆಯ ಭೀತಿ ಎದುರಾಗಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್. ಮನ್ಮಥ ಅವರನ್ನು ಉಚ್ಚಾಟಿಸುವಂತೆ ಮಂಡಲ ಸಮಿತಿ ಜಿಲ್ಲಾಧ್ಯಕ್ಷರಿಗೆ ಶಿಫಾರಸು ಮಾಡಲಾಗಿದೆ.

ಉಚ್ಚಾಟಿತರು ಆರೆಸ್ಸೆಸ್ ಮೂಲದವರಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳಾದರೂ ಸಚಿವ, ಸುಳ್ಯ ಶಾಸಕ ಎಸ್. ಅಂಗಾರ ಮೌನಕ್ಕೆ ಶರಣಾಗಿದ್ದಾರೆ. ಮುಂದೆ ಈ ಬೆಳವಣಿಗೆ ಯಾವ ರೀತಿಯ ತಿರುವು ಪಡೆದುಕೊಳ್ಳಿದೆ ಎನ್ನುವುದನ್ನು ಕಾದುನೋಡಬೇಕಿದೆ.