ಮಂಗಳೂರು: ಕೊರೋನಾ ಮುನ್ನೆಚ್ಚರಿಕೆ ಸಲುವಾಗಿ ವಾಹನಗಳ ತಪಾಸಣೆ ಮಾಡುತ್ತಿದ್ದ ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಮಾಡಿ, ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ, ನಂತರ ಮಾನಸಿಕ ಅಸ್ವಸ್ಥನಾದ ಕಾರಣ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೆಪ್ಪರೆಯ ಸಿನಾನ್ ಬಂಧಿತ ಆರೋಪಿ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮ ನಾಯ್ಕ ಜನರ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಸಿನಾನ್ ಎಂಬ ಯುವಕ ಮುರೂರು ಗಡಿಭಾಗಕ್ಕೆ ಬಂದು ಪೋಲೀಸರ ಮಾತನ್ನು ಕೇಳದೇ ಗಡಿ ದಾಟಲು ಯತ್ನ ಮಾಡಿದ್ದಾನೆ.
ಗಡಿ ದಾಟದಂತೆ ಪೊಲೀಸರು ಮನವಿ ಮಾಡುತ್ತಿದ್ದಂತೆ ಆತ ನೆಲದಿಂದ ಕಲ್ಲು ತೆಗೆದು ಏಕಾಏಕಿ ಪೋಲೀಸರ ಮೇಲೆ ಬಿಸಾಡಲು ಆರಂಭಿಸಿದ್ದಾನೆ. ಪರಿಣಾಮವಾಗಿ ಕರ್ತವ್ಯದಲ್ಲಿದ್ದ ಎ.ಎಸ್.ಐ. ಭಾಸ್ಕರ ಪ್ರಸಾದ್ ಹಾಗೂ ಪೋಲಿಸ್ ಸಿಬ್ಬಂದಿ ರಾಮ ನಾಯ್ಕ ಅವರಿಗೆ ಗಾಯಗಳಾಗಿದೆ.
ಅಲ್ಲದೇ ಈತ ಸ್ಧಳದಲ್ಲಿದ್ದ ಹೈವೇ ಪಟ್ರೋಲ್ ವಾಹನಕ್ಕೂ ಕಲ್ಲು ಬಿಸಾಡಲು ಆರಂಭಿಸಿದ್ದಾನೆ. ಕೂಡಲೇ ವಿಷಯ ತಿಳಿದು ಸುಳ್ಯ ಎಸ್.ಐ. ಹರೀಶ್ ಕೂಡಾ ಮುರೂರಿಗೆ ಆಗಮಿಸಿದ್ದು, ಗಾಯಾಳು ಪೋಲೀಸರಿಗೆ ಚಿಕಿತ್ಸೆ ನೀಡಲಾಗಿದೆ. ಕಲ್ಲು ಹೊಡೆದು ಆರೋಪಿಯು ಈ ವೇಳೆ ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿ ಬಂಧಿಸಿದ್ದಾರೆ, ಬಂಧಿತ ಸಿನಾನ್ ಮಾನಸಿಕ ಅಸ್ವಸ್ಥನಾಗಿರು ಕಾರಣದಿಂದ ಪ್ರಕರಣ ದಾಖಲಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.